

ರಾಮನಗರ : ಒಂದೆಡೆ ಕರೊನಾ ತೊಂದರೆ ನೀಡುತ್ತಿದ್ದರೆ ಮತ್ತೊಂದೆಡೆ ಕಾಲುಬಾಯಿ ರೋಗ ಮತ್ತೊಮ್ಮೆ ಹರಡುವ ಮೂಲಕ ರಾಸುಗಳ ಪ್ರಾಣಕ್ಕೆ ಕಂಟಕವಾಗಿದೆ.
2013ರಿಂದಲೂ ಜಿಲ್ಲೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಾರಣಾಂತಿಕ ಕಾಲುಬಾಯಿ ರೋಗ ಕಳೆದ ಎರಡು ಮೂರು ವರ್ಷಗಳಿಂದ ನಿಯಂತ್ರಣದಲ್ಲಿತ್ತು. ಈಗ ಮತ್ತೆ ವ್ಯಾಪಕ ರೂಪ ಪಡೆದುಕೊಳ್ಳುತ್ತಿರುವುದು ರೈತರ ನಿದ್ದೆಗೆಡಿಸಿದೆ.
2013ರ ಆಗಸ್ಟ್‌ನಲ್ಲಿ ಆರಂಭಗೊಂಡು ನವೆಂಬರ್‌ವರೆಗೂ ಆರ್ಭಟಿಸಿ 2 ಸಾವಿರಕ್ಕೂ ಹೆಚ್ಚು ರಾಸುಗಳನ್ನು ಬಲಿ ತೆಗೆದುಕೊಂಡಿತ್ತು. ಕಳೆದ ವರ್ಷ ಕನಕಪುರ ಮತ್ತು ಚನ್ನಪಟ್ಟಣದಲ್ಲಿ ವ್ಯಾಪಿಸಿದ್ದ ಸೋಂಕು ಈಗ ಜಿಲ್ಲೆಯಾದ್ಯಂತ ವ್ಯಾಪಿಸಿದೆ.
ಎಲ್ಲೆಲ್ಲಿ ರೋಗ: ಚನ್ನಪಟ್ಟಣ ತಾಲೂಕಿನ ಶೇ.60 ವ್ಯಾಪ್ತಿಯಲ್ಲಿ, ರಾಮನಗರ ಬಿಡದಿ, ಬೈರಮಂಗಲ, ಗೋಪಳ್ಳಿ, ಉರಗಳ್ಳಿ, ಕೋಡಿಯಾಲ, ಕರೇನಹಳ್ಳಿ, ಕ್ಯಾಸಾಪುರ, ಕೂಟಗಲ್, ಚೌಡೇಶ್ವರಿ ಹಳ್ಳಿ, ಎಂ.ಜಿ. ಪಾಳ್ಯ, ಮಾಗಡಿಯ ಹಲವಾರು ಕಡೆ, ಕನಕಪುರ ತಾಲೂಕಿನ ಚಿಕ್ಕಕಲ್ಬಾಳು, ಚಿಕ್ಕಮುದವಾಡಿ ಸೇರಿ ಹಲವಾರು ಪ್ರದೇಶಗಳಲ್ಲಿ ರೋಗ ವ್ಯಾಪಿಸಿದೆ. ಆದರೆ ರಾಮನಗರ ಮತ್ತು ಮಾಗಡಿಯಲ್ಲಿ ಮಾತ್ರ ಸೋಂಕು ವ್ಯಾಪಿಸಿದೆ ಎನ್ನುವ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡಲಾಗುತ್ತಿದೆ. ಆದರೆ ಕನಕಪುರ ಮತ್ತು ಚನ್ನಪಟ್ಟಣದಲ್ಲಿ ಸೋಂಕು ಹೆಚ್ಚಿದ್ದರೂ, ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸೋಂಕಿನ ಮಾಹಿತಿ ನೀಡುತ್ತಿಲ್ಲ ಎನ್ನುವ ಆರೋಪವಿದೆ.
ನಿಯಂತ್ರಣದಲ್ಲಿ ಇತ್ತು: 2013ರ ನಂತರ ಜಿಲ್ಲೆಯಲ್ಲಿ ಆಗಾಗ ರೋಗ ಕಾಣಿಸಿಕೊಂಡರೂ ಪಶು ಸಂಗೋಪನಾ ಇಲಾಖೆ ಮತ್ತು ಕೆಎಂಎಫ್ ವೈದ್ಯರು ಸೂಕ್ತ ಚಿಕಿತ್ಸೆ ನೀಡುವ ಮೂಲಕ ನಿಯಂತ್ರಣಕ್ಕೆ ತರುತ್ತಿದ್ದರು. ಆದರೆ, ಈ ಬಾರಿ ಮಾತ್ರ ರೋಗ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಕಳೆದ ವರ್ಷವೂ ರೋಗ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾದ ಪಶುಸಂಗೋಪನಾ ಇಲಾಖೆ, ಕೆಎಂಎಫ್ ಮತ್ತು ಬಮುಲ್ ರೋಗ ನಿಯಂತ್ರಣಕ್ಕೆ ಸಾಮೂಹಿಕ ಲಸಿಕಾ ಕಾಯಕ್ರಮ ಮತ್ತು ವಾಷಿಂಗ್ ಸೋಡಾ ಮಿಶ್ರಿತ ದ್ರಾವಣ ಸಿಂಪಡಣೆಯಂತಹ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ರೋಗವನ್ನು ಹತೋಟಿಗೆ ತಂದಿದ್ದರು.
ಕಾರಣವೇನು?: ಸಾಮೂಹಿಕ ಲಸಿಕಾ ಕಾರ್ಯಕ್ರಮದ ಹೊರತಾಗಿಯೂ ಕಾಲುಬಾಯಿ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಆದರೆ ರೋಗದ ವೈರಾಣುಗಳು ಪ್ರತಿ 2-3 ವರ್ಷಗಳಿಗೆ ಒಮ್ಮೆ ಸ್ವರೂಪ ಬದಲಾಯಿಸಿಕೊಂಡು ರೋಗ ನಿಯಂತ್ರಣಕ್ಕೆ ಬಳಕೆ ಮಾಡುವ ಔಷಧಗಳ ವಿರುದ್ಧ ಹೋರಾಡುವ ಶಕ್ತಿ ಪಡೆದುಕೊಳ್ಳುವ ಸಾಧ್ಯತೆ ಇರುವುದರಿಂದ ರೋಗ ನಿಯಂತ್ರಣ ಕಷ್ಟವಾಗುತ್ತಿದೆ ಎಂದು ಪಶುವೈದ್ಯರೊಬ್ಬರು ಮಾಹಿತಿ ನೀಡಿದರು. ಇದರ ಜತೆಗೆ, ರೈತರೂ ಸಾಮೂಹಿಕ ಲಸಿಕೆ ಕಾರ್ಯಕ್ರಮದಲ್ಲಿ ಅಥವಾ ವೈಯಕ್ತಿಕವಾಗಿ ರಾಸುಗಳಿಗೆ ಕಾಲುಬಾಯಿ ರೋಗ ತಡೆ ಲಸಿಕೆ ಹಾಕಿಸಬೇಕು. ಆದರೆ, ಹಾಲಿನ ಇಳುವರಿ ಕಡಿಮೆಯಾಗುತ್ತದೆ ಎನ್ನುವ ಕಾರಣ ಮುಂದಿಟ್ಟುಕೊಂಡು ರೈತರು ಲಸಿಕೆ ಹಾಕಿಸದಿರುವುದು ಹಾಗೂ ಕೊಟ್ಟಿಗೆಯಲ್ಲಿ ಸ್ವಚ್ಛತೆ ಕಾಪಾಡದಿರುವುದೇ ರೋಗ ಹರಡಲು ಪ್ರಮುಖ ಕಾರಣವಾಗಿದೆ. ಇದರ ಜತೆಗೆ ಜಿಲ್ಲೆಯಲ್ಲಿ ಹೆಚ್ಚು ಹಾಲು ಕೊಡುವ ಮಿಶ್ರ ತಳಿ ರಾಸುಗಳು ಇದ್ದು, ಇವುಗಳು ಬೇಗ ಸೋಂಕಿಗೆ ತುತ್ತಾಗುತ್ತವೆ.
ಲಸಿಕೆ ನಿಧಾನ : ಕಳೆದ ಅಕ್ಟೋಬರ್‌ನಲ್ಲಿ ಲಸಿಕೆ ನೀಡಲಾಗಿತ್ತು. ಪ್ರತಿ 6 ತಿಂಗಳಿಗೊಮ್ಮೆ ಸಾಮೂಹಿಕ ಲಸಿಕೆ ಹಾಕಬೇಕಾಗಿದ್ದು, ಈಗ 9 ತಿಂಗಳಾದರೂ ಲಸಿಕೆ ಪೂರೈಕೆ ಆಗಿಲ್ಲ. ಅಲ್ಲದೆ ಅಕ್ಟೋಬರ್‌ನಲ್ಲಿ ನೀಡಿದ ಲಸಿಕೆ ಗುಣಮಟ್ಟವೂ ಕಳಪೆ ಆಗಿತ್ತು ಎಂದು ಹೇಳಲಾಗಿದ್ದು, ಇದೀಗ ಸಾಮೂಹಿಕ ಲಸಿಕೆ ಹಾಕದ ಹಿನ್ನೆಲೆಯಲ್ಲಿ ರೋಗ ವ್ಯಾಪಿಸುತ್ತಿದೆ. ಆದರೆ, ಈಗ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ರೋಗ ಕಾಣಿಸಿಕೊಂಡ ಗ್ರಾಮದ ಸುತ್ತ ಮುತ್ತಲಿನ 5 ಕಿ.ಮೀ. ವ್ಯಾಪ್ತಿಯಲ್ಲಿ ಲಸಿಕೆ ಹಾಕುವ ಕಾರ್ಯ ಮಾಡಲಾಗುತ್ತಿದೆ. ಇದರಿಂದ ರೋಗ ಮತ್ತೊಂದು ಗ್ರಾಮಕ್ಕೆ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ.
ರಾಮನಗರದ ಕೆಲವೆಡೆ ಮಾತ್ರ ಸೋಂಕು ಕಾಣಿಸಿಕೊಂಡಿದೆ. ಸೋಂಕು ಕಾಣಿಸಿಕೊಂಡ ಗ್ರಾಮದ 5 ಕಿ.ಮೀ. ವ್ಯಾಪ್ತಿಯಲ್ಲಿ ರಿಂಗ್ ವ್ಯಾಕ್ಸಿನ್ ಮಾಡಲಾಗುತ್ತಿದೆ. ಡಾ.ತಿರುಮಲೇಗೌಡ ಉಪನಿರ್ದೇಶಕರು, ಪಶು ಸಂಗೋಪನಾ ಇಲಾಖೆ, ರಾಮನಗರ ರಾಮನಗರ ತಾಲೂಕು ಒಂದರಲ್ಲಿ ಅಣ್ಣಹಳ್ಳಿ, ಅಣ್ಣೇದೊಡ್ಡಿ, ಎಂ.ಜಿ. ಪಾಳ್ಯ ಸುತ್ತಮುತ್ತಲ ಪ್ರದೇಶದಲ್ಲಿ ಸುಮಾರು 100ಕ್ಕೂ ಹೆಚ್ಚು ರಾಸುಗಳು ರೋಗಕ್ಕೆ ಬಲಿಯಾಗಿವೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ಇಲ್ಲ ಎಂದು ಹೇಳುತ್ತಿದ್ದಾರೆ. ಇಂತಹ ಅಧಿಕಾರಿಗಳಿಂದ ರೈತರು ಸಂಕಷ್ಟಕ್ಕೆ ಒಳಗಾಗುವಂತೆ ಆಗಿದೆ. ಕೃಷ್ಣಪ್ಪ ಅಧ್ಯಕ್ಷ, ತಾಲೂಕು ರೈತ ಸಂಘ, ರಾಮನಗರ