

ರಾಮನಗರ : ಕರೊನಾ ಜನರ ಜೀವವನ್ನು ಮಾತ್ರವಲ್ಲ ಜೀವನದ ಹಾದಿಯನ್ನು ತಪ್ಪಿಸುತ್ತಿದೆ. ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದ ರೈತರಿಗೆ ಕೆಲವು ದಿನಗಳ ಕಾಲ ಪಶು ಆಹಾರದ ಕೊರತೆ ಬಾಧಿಸುವ ಸಾಧ್ಯತೆಯಿದೆ.
ಹೌದು, ಪಶು ಆಹಾರ ಉತ್ಪಾದನೆಗೆ ಬಳಕೆ ಮಾಡುವ ಕಚ್ಚಾ ವಸ್ತುಗಳ ಕೊರತೆ ಯಿಂದಾಗಿ ಉತ್ಪಾದನೆ ಕುಂಠಿತವಾಗಿದ್ದು, ಕೆಲವು ದಿನಗಳ ಕಾಲ ಪಶು ಆಹಾರ ಲಭ್ಯತೆಯಲ್ಲಿ ವಿಳಂಬವಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಉತ್ಪಾದನೆ: ರಾಜ್ಯದಲ್ಲಿ ಪಶು ಆಹಾರವನ್ನು ಉತ್ಪಾದಿಸುವ ಕೆಲಸವನ್ನು ಕರ್ನಾಟಕ ಹಾಲು ಮಹಾ ಮಂಡಳ ಮಾಡುತ್ತಿದೆ. ಅಲ್ಲದೆ ತಮಿಳುನಾಡಿನ ಒಂದು ಕಂಪನಿಗೂ ಆಹಾರ ಉತ್ಪಾದನೆಗೆ ಗುತ್ತಿಗೆಯನ್ನು ನೀಡಲಾಗಿದೆ. ಆದರೆ, ತಮಿಳುನಾಡಿನ ಕಾರ್ಖಾನೆಗೆ ಬೇಕಾದ ಕಚ್ಚಾವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಪ್ರಮುಖವಾಗಿ ಮೆಕ್ಕೆಜೋಳ, ಹತ್ತಿ ಹಿಂಡಿ ಸೇರಿದಂತೆ ಇತರೆ ಕಚ್ಚಾ ವಸ್ತುಗಳನ್ನು ಬಳಕೆ ಮಾಡಿ ಪೌಷ್ಟಿಕವಾದ ಪಶು ಆಹಾರವನ್ನು ಉತ್ಪಾದನೆ ಮಾಡಲಾಗುತ್ತದೆ. ಹಾಲಿನ ಇಳುವರಿ ಹೆಚ್ಚಳದಲ್ಲಿ ಈ ಪಶು ಆಹಾರ ಪ್ರಮುಖ ಪಾತ್ರ ವಹಿಸುತ್ತಿದೆ. ಇದೀಗ ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಿಗೆ ಪಶು ಆಹಾರ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಈಗಾಗಲೇ ಜಿಲ್ಲೆಯ ವಿವಿಧ ಎಂಪಿಸಿಎಸ್‌ಗಳು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ಪಶು ಆಹಾರದ ಕೊರತೆಯ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಈ ಮೆಸೇಜ್ ಹರಿದಾಡುತ್ತಿದೆ.
ಬೇಕಿದೆ 12 ಸಾವಿರ ಟನ್: ರಾಜ್ಯದಲ್ಲಿ ಪ್ರತಿ ತಿಂಗಳು ಸುಮಾರು 60 ಸಾವಿರ ಟನ್ ಪಶು ಆಹಾರಕ್ಕೆ ಬೇಡಿಕೆ ಇದೆ. ಬಹುತೇಕ ಹೆಚ್ಚಿನ ರೈತರು ಕೆಎಂಎ್ನಿಂದ ಪೂರೈಕೆ ಆಗುವ ಪಶು ಆಹಾರದ ಮೇಲೆ ಅವಲಂಬಿತವಾಗಿದ್ದಾರೆ. ಇನ್ನು ಬಮುಲ್ ವ್ಯಾಪ್ತಿಗೆ ಪ್ರತಿ ತಿಂಗಳು 12-13 ಸಾವಿರ ಟನ್ ಬೇಡಿಕೆ ಇದೆ. ಚನ್ನಪಟ್ಟಣ ತಾಲೂಕು ಒಂದರಿಂದಲೇ ಸುಮಾರು 2 ಸಾವಿರ ಟನ್ ಪಶು ಆಹಾರಕ್ಕೆ ಬೇಡಿಕೆ ಇದೆ ಎನ್ನುತ್ತಾರೆ ಬಮುಲ್ ಸಿಬ್ಬಂದಿ.
ಪರ್ಯಾಯ ವ್ಯವಸ್ಥೆ: ಕಚ್ಚಾವಸ್ತು ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ತಮಿಳುನಾಡಿನ ಪಶು ಆಹಾರ ಉತ್ಪಾದನಾ ಘಟಕ ಉತ್ಪಾನದೆ ನಿಲ್ಲಿಸಿದ್ದು, 2-3 ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ. ಇದರಿಂದ ಈಗ ಉಂಟಾಗಿರುವ ಕೊರತೆ ನೀಗಲಿದ್ದು ಎಂದಿನಂತೆ ಪೂರೈಕೆ ಆಗಲಿದೆ ಎನ್ನುವುದು ಬಮುಲ್ ಮಾಹಿತಿ. ಇನ್ನು ತಕ್ಷಣಕ್ಕೆ ಎದುರಾಗಿರುವ ಸಮಸ್ಯೆ ಪರಿಹಾರಕ್ಕೆ ಧಾರವಾಡದಿಂದಲೂ ಸುಮಾರು 2 ಸಾವಿರ ಟನ್ ಪಶು ಆಹಾರವನ್ನು ತರಿಸಿಕೊಳ್ಳಾಗುತ್ತಿದ್ದು, ಅಗತ್ಯವಿರುವೆಡೆಗೆ ಪೂರೈಕೆ ಮಾಡಲಾಗುತ್ತದೆ ಎನ್ನಲಾಗಿದೆ.
ಬಮುಲ್‌ಗೆ ಸೋಂಕಿನ ಆತಂಕ : ಕರೊನಾ ಆತಂಕ ಬಮುಲ್ ಅನ್ನು ಕಾಡುತ್ತಿದೆ. ಒಂದೆಡೆ ಬಮುಲ್ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಕೂಡ ಕರೊನಾ ಸೋಂಕಿಗೆ ಒಳಗಾಗುತ್ತಿದ್ದಾರೆ.ಕನಕಪುರದಲ್ಲಿ ಬಮುಲ್ 18 ಸಿಬ್ಬಂದಿ ಸೋಂಕಿಗೆ ಒಳಗಾಗಿದ್ದರೆ, ಬೆಂಗಳೂರಿನಲ್ಲಿ 15ಕ್ಕೂ ಹೆಚ್ಚು ಮಂದಿ ಸೊಂಕಿಗೆ ಒಳಗಾಗಿದ್ದಾರೆ ಎಂದು ಬಮುಲ್ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದರು.
ತಮಿಳುನಾಡಿನ ಪಶು ಆಹಾರ ಉತ್ಪಾದನಾ ಘಟಕದಲ್ಲಿ ಉತ್ಪಾದನೆ ನಿಂತಿರುವುದರಿಂದ ಪಶು ಆಹಾರ ಪೂರೈಕೆಯಲ್ಲಿ ವ್ಯತ್ಯಯ ಆಗಿದೆ. ಆದರೆ ಇದನ್ನು ಸರಿದೂಗಿಸುವ ಕೆಲಸ ಮಾಡಲಾಗುತ್ತಿದ್ದು, ಧಾರವಾಡದಿಂದ ಸುಮಾರು 2 ಸಾವಿರ ಟನ್ ಪಶು ಆಹಾರವನ್ನು ತರಿಸಿಕೊಳ್ಳಲಾಗುತ್ತಿದ್ದು, ಕೊರತೆ ನೀಗಲಿದೆ. ಶೀಘ್ರವೇ ತಮಿಳುನಾಡಿನ ಘಕಟವೂ ಕಾರ್ಯನಿರ್ವಹಿಸಲಿದ್ದು, ಸಮಸ್ಯೆಗೆ ಪರಿಹಾರ ದೊರೆಯಲಿದೆ. ನರಸಿಂಹಮೂರ್ತಿ ಅಧ್ಯಕ್ಷರು, ಬಮುಲ್