

ನವದೆಹಲಿ: ಸಹೋದ್ಯೋಗಿಗೆ ನೀಡಿದ ಫೇರ್ವೆಲ್ ಪಾರ್ಟಿಯಲ್ಲಿ ನೃತ್ಯ ಮಾಡುವ ವೇಳೆ ಹೆಡ್ ಕಾನ್ಸ್ಟೇಬಲ್ ಒಬ್ಬರು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯ ರೂಪ್ನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಮೃತರನ್ನು ರವಿಕುಮಾರ್ ಎಂದು ಗುರುತಿಸಲಾಗಿದ್ದು, ಇವರು ರೂಪ್ನಗರ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಮಾತನಾಡಿರುವ ಹಿರಿಯ ಅಧಿಕಾರಿಯೊಬ್ಬರು, ಸ್ಟೇಷನ್ ಹೌಸ್ ಅಧಿಕಾರಿ ವರ್ಗಾವಣೆಗೊಂಡಿದ್ದಕ್ಕೆ ಠಾಣೆಯ ಸಿಬ್ಬಂದಿ ಎಲ್ಲಾ ಸೇರಿ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಹೆಡ್‌ಕಾನ್ಸ್‌ಟೇಬಲ್ ರವಿಕುಮಾರ್ ಎಲ್ಲರೊಂದಿಗೆ ಕುಣಿದು ಕುಪ್ಪಳಿಸಿದ್ದರು. ಆದರೆ ಡ್ಯಾನ್ಸ್ ಮಾಡುತ್ತಿದ್ದಾಗಲೇ ಇದ್ದಕ್ಕಿದ್ದಂತೆ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ. ಇದನ್ನು ಗಮನಿಸಿದ ಸಿಬ್ಬಂದಿ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಬಾಗ್‌ಪತ್ ಮೂಲದ ರವಿಕುಮಾರ್ 2010ರಲ್ಲಿ ಪೊಲೀಸ್ ಆಗಿ ನೇಮಕಗೊಂಡಿದ್ದರು. ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ಹೆಡ್ ಕಾನ್‌ಸ್ಟೆಬಲ್ ರವಿಕುಮಾರ್ ಈಗಾಗಲೇ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದರು. ಅವರು 45 ದಿನಗಳ ಹಿಂದೆ ಆಂಜಿಯೋಗ್ರಫಿಗೆ ಒಳಗಾಗಿದ್ದರು ಎಂದು ವರದಿಯಾಗಿದೆ.