ಗಾಂಧಿ ಕುಟುಂಬದ 3 ಟ್ರಸ್ಟ್​ಗಳ ತನಿಖೆಗೆ ಸಮನ್ವಯ ಸಮಿತಿ ರಚನೆ

home ministry
Published on

ನವದೆಹಲಿ: ಗಾಂಧಿ ಕುಟುಂಬಕ್ಕೆ ಸೇರಿದ ರಾಜೀವ್​ ಗಾಂಧಿ ಪ್ರತಿಷ್ಠಾನ (ಆರ್​ಜಿಎಫ್​), ರಾಜೀವ್​ ಗಾಂಧಿ ಚಾರಿಟಬಲ್​ ಟ್ರಸ್ಟ್​ ಮತ್ತು ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್​ನ ಆರ್ಥಿಕ ಅವ್ಯವಹಾರಗಳ ಕುರಿತು ತನಿಖೆ ನಡೆಸಲು ಅನುವಾಗುವಂತೆ ಕೇಂದ್ರ ಸರ್ಕಾರ ಅಂತರಸಚಿವಾಲಯದ ಸಮಿತಿಯೊಂದನ್ನು ರಚಿಸಿದೆ. ಈ ಟ್ರಸ್ಟ್​ಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮ ನಗದು ವ್ಯವಹಾರ, ಆದಾಯ ತೆರಿಗೆ ಕಾಯ್ದೆಯ ಉಲ್ಲಂಘನೆ ಮತ್ತು ವಿದೇಶಿ ದೇಣಿಗೆ ಕಾಯ್ದೆಯ ಉಲ್ಲಂಘನೆ ಕುರಿತ ತನಿಖೆಗಳ ಸಮನ್ವಯ ಸಮಿತಿ ಇದಾಗಿರುತ್ತದೆ.

ಇದನ್ನು ಖಚಿತಪಡಿಸಿರುವ ಕೇಂದ್ರ ಗೃಹಸಚಿವಾಲಯದ ವಕ್ತಾರರು, ಜಾರಿ ನಿರ್ದೇಶನಾಲಯದ ವಿಶೇಷ ನಿರ್ದೇಶಕರು ಸಮನ್ವಯ ಸಮಿತಿಯ ಮುಖ್ಯಸ್ಥರಾಗಿರುತ್ತಾರೆ. ಸಿಬಿಐ ಈ ಸಮಿತಿಯ ಭಾಗವಾಗಿರಲಿದೆ ಎಂದು ಹೇಳಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​, ಕಾಂಗ್ರೆಸ್ ಮುಖಂಡರಾದ ರಾಹುಲ್​ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಪಿ. ಚಿದಂಬರಂ 1991ರಲ್ಲಿ ಸ್ಥಾಪನೆಗೊಂಡಿರುವ ಆರ್​ಜಿಎಫ್​ನ ಟ್ರಸ್ಟಿಗಳಾಗಿದ್ದಾರೆ. ಸೋನಿಯಾ ಗಾಂಧಿ ಇದರ ಅಧ್ಯಕ್ಷರಾಗಿದ್ದಾರೆ. ಇವರು ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್​ನ ಉಸ್ತುವಾರಿಯನ್ನೂ ಹೊತ್ತಿದ್ದಾರೆ.

ಕಳೆದ ವಾರ ಸರಣಿ ಟ್ವೀಟ್​ ಮಾಡಿದ್ದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯ (ಪಿಎಂಎನ್​ಆರ್​ಎಫ್​) ಹಣವನ್ನು ಆರ್​ಜಿಎಫ್​ಗೆ ವರ್ಗಾಯಿಸಲಾಗಿತ್ತು. ಒಂದು ಕುಟುಂಬದ ಆಸ್ತಿ ಮಾಡುವ ಹಪಾಹಪಿ ರಾಷ್ಟ್ರದ ಹಿತಾಸಕ್ತಿಗೇ ಧಕ್ಕೆಯುಂಟು ಮಾಡಿದೆ. ಕುಟುಂಬ ನಿರ್ವಹಣೆ ಪ್ರತಿಷ್ಠಾನಗಳಿಗೆ ಸಾರ್ವಜನಿಕ ಹಣವನ್ನು ವರ್ಗಾವಣೆ ಮಾಡಿ ಭಾರಿ ಹಗರಣವನ್ನೇ ಸೃಷ್ಟಿಸಿದೆ ಎಂದು ಕಾಂಗ್ರೆಸ್​ ಮುಖಂಡರ ವಿರುದ್ಧ ಹರಿಹಾಯ್ದಿದ್ದರು. ಇದರ ಬೆನ್ನಲ್ಲೇ ಸರ್ಕಾರ ಗಾಂಧಿ ಕುಟುಂಬದ ಎಲ್ಲ ಟ್ರಸ್ಟ್​ಗಳ ವಿರುದ್ಧ ತನಿಖೆಗೆ ಮುಂದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net