

ಶಿಕಾರಿಪುರ: ಸಹಕಾರ ತತ್ವ ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಇಂತಹ ಸಹಕಾರ ಕ್ಷೇತ್ರಗಳ ಸಂಘ ಸಂಸ್ಥೆಗಳ ಮೂಲಕ ಅದು ಅನಾವರಣಗೊಳ್ಳಬೇಕು ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ವಿವಿಧ ಸಹಕಾರ ಸಂಘಟನೆಗಳು, ಸಹಕಾರ ಬ್ಯಾಂಕ್‌ಗಳಿಂದ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ 73ನೇ ಸಹಕಾರಿ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು, ರೈತರ ಆರ್ಥಿಕ ಸಬಲೀಕರಣ, ಗ್ರಾಮೀಣಾಭಿವೃದ್ಧಿಯಲ್ಲಿ ಸಹಕಾರ ಸಂಘಗಳ ಪಾತ್ರ ದೊಡ್ಡದು. ಸಹಕಾರ ಚಳವಳಿಯಿಂದ ಸಮಾಜದ ಆರ್ಥಿಕ ಪ್ರಗತಿಗೆ ದೊರೆಯುವ ಕೊಡುಗೆ ಅನುಪಮ. ಎಲ್ಲರೂ ಸಹಕಾರ ತತ್ವದಡಿ ಕಾರ್ಯನಿರ್ವಹಿಸುವ ಮೂಲಕ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಬೇಕು ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 80ರ ದಶಕದಲ್ಲಿ ವೀರಶೈವ ಸಹಕಾರ ಸಂಘದ ಮೂಲಕ ಸಹಕಾರ ಕ್ಷೇತ್ರ ಪ್ರವೇಶಿಸಿದರು. ಅದು ಅವರನ್ನು ಒಬ್ಬ ಜನಪರ ಕಾಳಜಿಯ ನಾಯಕನನ್ನಾಗಿ ಮಾಡಿತು. ಅವರು ತಾಲೂಕಿನ ಜನರ ಆಶೀರ್ವಾದದ ಬಲದಿಂದ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಶಿಕಾರಿಪುರ ತಾಲೂಕು ಸಹಕಾರಿಗಳ ತವರು ಎಂದು ತಿಳಿಸಿದರು.
ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹದೇವಪ್ಪ ಮಾತನಾಡಿ, ರಾಷ್ಟ್ರೀಯ ಬ್ಯಾಂಕ್‌ಗಳಿಗಿಂತ ಸಹಕಾರ ಸಂಘಗಳು ರೈತರಿಗೆ ಹತ್ತಿರವಾಗಿವೆ. ಇಂತಹ ಸಂಕಷ್ಟದ ಸಮಯದಲ್ಲಿ ಸಹಕಾರಿ ಬ್ಯಾಂಕುಗಳು ರೈತರಿಗೆ ಶಕ್ತಿಯಾಗಿ ನಿಲ್ಲಬೇಕು ಎಂದು ಆಶಿಸಿದರು.
ಹಿರಿಯ ಸಹಕಾರಿ ಬಿ.ಡಿ.ಭೂಕಾಂತ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಬಿ.ಚೆನ್ನವೀರಪ್ಪ, ಅಗಡಿ ಅಶೋಕ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಲ್.ಬಸವರಾಜ್, ಯೂನಿಯನ್ ಬ್ಯಾಂಕ್ ಸದಸ್ಯ ದಿನೇಶ್, ಚೆನ್ನೇಗೌಡ ಇತರರಿದ್ದರು.