ಸಹಕಾರ ಚುನಾವಣೆಗಳು ರಾಜಕೀಯ ಪ್ರೇರಿತವಾಗದಿರಲಿ

dcc bank workshop
ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನಲ್ಲಿ ಒಂದು ದಿನದ ಚುನಾವಣೆ ಪೂರ್ವ ಸಿದ್ಧತಾ ವಿಶೇಷ ತರಬೇತಿ ಶಿಬಿರವನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಉದ್ಘಾಟಿಸಿದರು. ಎಸ್.ಕೆ.ಮರಿಯಪ್ಪ, ಎಚ್.ಯು.ಸುರೇಶ್ ವಾಟಗೋಡು, ಪಿ.ವೀರಮ್ಮ, ಎಸ್.ಎಲ್.ನಿಖಿಲ್, ಎಚ್.ಎಸ್.ಸಂಜೀವ್‌ಕುಮಾರ್, ಯಶವಂತ್‌ಕುಮಾರ್ ಇದ್ದರು.
Published on

ಶಿವಮೊಗ್ಗ: ಸಹಕಾರ ಸಂಘಗಳ ಚುನಾವಣೆಗಳು ಯಾವುದೇ ಪ್ರಭಾವಗಳಿಗೆ ಒಳಗಾಗದೆ ಪ್ರಜಾಪ್ರಭುತ್ವದ ಅಡಿಯಲ್ಲಿ ನಡೆಯಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಹೇಳಿದರು.

ಬಾಲರಾಜ್ ಅರಸ್ ರಸ್ತೆಯ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಬುಧವಾರ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ ಆಶ್ರಯದಲ್ಲಿ ಶಿವಮೊಗ್ಗ ಉಪ ವಿಭಾಗದಲ್ಲಿ ಚುನಾವಣೆ ನಡೆಯುವ ಸಹಕಾರ ಸಂಘಗಳ ರಿಟರ್ನೀಂಗ್ ಅಧಿಕಾರಿ ಮತ್ತು ಮುಖ್ಯ ಕಾರ್ಯನಿರ್ವಾಹಕರಿಗೆ ಆಯೋಜಿಸಿದ್ದ ಒಂದು ದಿನದ ಚುನಾವಣೆ ಪೂರ್ವ ಸಿದ್ಧತಾ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರ ಚುನಾವಣೆಗಳು ರಾಜಕೀಯ ಪ್ರೇರಿತವಾಗಬಾರದು. ಈ ಚುನಾವಣೆಗಳ ಪ್ರಕ್ರಿಯೆಗಳು ಆರು ತಿಂಗಳ ಮೊದಲೇಯಾಗಬೇಕು. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಪಾತ್ರ ಇಲ್ಲಿ ಬಹಳ ಮುಖ್ಯವಾಗಲಿದ್ದು, ಸಮಗ್ರವಾಗಿ ಸದಸ್ಯರ ಪಟ್ಟಿ ತಯಾರಾಗಬೇಕು. ಒಂದು ವರ್ಷದ ಮೊದಲು ಸದಸ್ಯರಿಗೆ ಮಾತ್ರ ಮತದಾನದ ಹಕ್ಕು ಇರಲಿದ್ದು ಯಾವುದೇ ಕಾರಣಕ್ಕೂ ಮತದಾನ ಪ್ರಕ್ರಿಯೆಯನ್ನು ಕಸಿದುಕೊಳ್ಳುವಂತಹ ಸಂಗತಿಗಳು ನಡೆಯಬಾರದು. ಯಾವುದೇ ರಾಜಕಾರಣಿಗಳ ಪ್ರವೇಶ ಸಲ್ಲದು. ಇದು ಪಕ್ಷಾತೀತವಾಗಿದ್ದು ಯಾವುದೇ ರಾಜಕೀಯ ಪಕ್ಷದ ಚಿಹ್ನೆಗಳು ವ್ಯಕ್ತಿಗಳ ಗುರುತು ಇರುವುದಿಲ್ಲ ಎಂದರು.

ಸಹಕಾರ ಸಂಘಗಳ ಚುನಾವಣೆಗಳಲ್ಲಿ ಹಲವು ಬಾರಿ ದೂರುಗಳು ಬಂದಿರುತ್ತವೆ. ನ್ಯಾಯಾಲಯದ ಮೆಟ್ಟಿಲು ಸಹ ಏರಬೇಕಾಗುತ್ತದೆ. ಇದಕ್ಕೆ ಅವಕಾಶ ಕೊಡಬಾರದು. ಕಾನೂನಿಗೆ ತೊಂದರೆಯಾಗದಂತೆ ಚುನಾವಣಾ ವಿಧಿ ವಿಧಾನಗಳನ್ನು ನಡೆಸಬೇಕು. ಈ ಹಿನ್ನಲೆಯಲ್ಲಿ ಈ ಶಿಬಿರವನ್ನು ಆಯೋಜಿಸಿದ್ದು, ಸಂಬಂಧಪಟ್ಟವರು ಈ ಬಗ್ಗೆ ಮನನ ಮಾಡಿಕೊಂಡು ಚುನಾವಣೆ ಪ್ರಕ್ರಿಯೆಗಳು ಶಾಂತಿಯುತವಾಗಿ, ನ್ಯಾಯಯುತವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ ಮಾತನಾಡಿ, ಇದೊಂದು ವಿಶೇಷ ತರಬೇತಿ ಶಿಬಿರವಾಗಿದೆ. ಚುನಾವಣಾ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ನಿರ್ಧಾರಗಳು ನಿಯಮಗಳು, ಈ ತರಬೇತಿ ಶಿಬಿರದಿಂದ ತಿಳಿಯುತ್ತವೆ. ಸಹಕಾರ ಸಂಘಗಳ ಚುನಾವಣೆಗಳೆಂದರೆ ರಾಜಕೀಯ ಚುನಾವಣೆಗಳು ಅಲ್ಲ. ಇಲ್ಲಿ ಎಲ್ಲ ಪಕ್ಷದವರು ಇರುತ್ತಾರೆ. ಪರಸ್ಪರ ಸ್ನೇಹದಿಂದ, ವಿಶ್ವಾಸದಿಂದ ಚುನಾವಣೆಗಳನ್ನು ಎದುರಿಸಬೇಕು. ಸೋಲು ಗೆಲುವು ನಂತರದ ಮಾತು ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿದ್ದ ಜಿ.ಕೆ.ರಾಮಪ್ಪಮತ್ತು ಶಾಂತರಾಜು ತರಬೇತಿ ನೀಡಿದರು. ಸಹಕಾರಿ ಯೂನಿಯನ್ ಬ್ಯಾಂಕ್‌ನ ಜಿಲ್ಲಾಧ್ಯಕ್ಷ ಎಚ್.ಯು.ಸುರೇಶ್ ವಾಟಗೋಡು ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಪಿ.ವೀರಮ್ಮ, ಎಸ್.ಎಲ್.ನಿಖಿಲ್, ಉಪಾಧ್ಯಕ್ಷ ಎಚ್.ಎಸ್.ಸಂಜೀವ್‌ಕುಮಾರ್, ಸಿಇಒ ಯಶವಂತ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net