ಜನರಿಗೆ ಕಾಂಗ್ರೆಸ್ ಸರ್ಕಾರದ ಹಗಲುದರೋಡೆಯ ಮನವರಿಕೆ: ವಿಜಯೇಂದ್ರ ಟೀಕೆ | Siddaramaiah's mask fell off

B.Y.Vijayendra
Published on

ಬೆಂಗಳೂರು: ದರಿದ್ರ- ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ನಿರಂತರವಾಗಿ ಇರಲಿದೆ. ರಾಜ್ಯ ಸರ್ಕಾರವು ಹಗಲು ದರೋಡೆ ಮಾಡುತ್ತಿದೆ ಎಂಬುದು ಜನರಿಗೆ ಮನವರಿಕೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದರು.

ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಜನರ ವಿಶ್ವಾಸ ಮತ್ತು ಆಶೀರ್ವಾದ ಪಡೆದು ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದೀಗ ಎಲ್ಲವನ್ನೂ ಗಾಳಿಗೆ ತೂರಿ ರೈತರು, ಬಡವರು, ಜನಸಾಮಾನ್ಯರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶೇಕಡ 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಬಿಜೆಪಿಯನ್ನು ಕರೆದಿದ್ದರು. ಅದಕ್ಕೆ ಪುರಾವೆ ಇಲ್ಲ. ನಾವು ಮುಗ್ಗರಿಸಿದ್ದೂ ಆಗಿದೆ. ಬಿಜೆಪಿ ನಿರಂತರ ಹೋರಾಟ ಮಾಡುವ ಮೂಲಕ ಈ ಸರ್ಕಾರಕ್ಕೆ ತಕ್ಕ ಶಾಸ್ತಿ ಮಾಡಲಿದೆ ಎಂದು ಬಿ.ವೈ.ವಿಜಯೇಂದ್ರ ಎಚ್ಚರಿಸಿದರು.

ಕಳಚಿ ಬಿದ್ದ ಮುಖವಾಡ

ಸಿದ್ದರಾಮಯ್ಯನವರು ಎರಡನೇ ಬಾರಿ ಮುಖ್ಯಮಂತ್ರಿಯಾದ ಬಳಿಕ ಆನೆ ನಡೆದಿದ್ದೇ ದಾರಿ ಎಂಬಂತೆ ವರ್ತಿಸುತ್ತಿದ್ದಾರೆ. ಸಿದ್ದರಾಮಯ್ಯನವರ ಕಪಟ ಸಮಾಜವಾದಿ ಮುಖವಾಡ ಈ ಅಧಿಕಾರಾವಧಿಯಲ್ಲಿ ಕಳಚಿ ಬಿದ್ದಿದೆ ಎಂದು ವ್ಯಂಗ್ಯವಾಡಿದರು.

ಹಿಂದೆ ಬಿಜೆಪಿ ಸರ್ಕಾರ ಅತ್ಯುತ್ತಮವಾಗಿ ಕೆಲಸ ಮಾಡಿದ್ದರೂ ಸಹ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ಸಿಗರು ಸಾಕಷ್ಟು ಅಪಪ್ರಚಾರ ಮಾಡಿದರು. ಜನರ ಒಳಿತಿಗಾಗಿ ಈ ಸರ್ಕಾರ ಬಂದಿಲ್ಲ; ಜನರ ಒಳಿತಿಗಾಗಿ ಅಧಿಕಾರ ಪಡೆದಿದ್ದರೆ ಇಂಥ ದರಿದ್ರ ಸರ್ಕಾರವನ್ನು ಜನತೆ ನೋಡಬೇಕಿರಲಿಲ್ಲ ಎಂದರು.

ಹೈಕಮಾಂಡ್ ಅಥವಾ ಗಾಂಧಿ ಕುಟುಂಬಕ್ಕೆ ಕರ್ನಾಟಕ ರಾಜ್ಯವನ್ನು ಅಡ ಇಡಲು ಮತ್ತು ಚುನಾವಣೆ ವೇಳೆ ಎಟಿಎಂ ಆಗಿ ಪರಿವರ್ತಿಸಲು ಕಾಂಗ್ರೆಸ್ಸಿಗೆ ಇಲ್ಲಿ ಸರಕಾರ ಬೇಕಿದೆ ಎಂದು ಟೀಕಿಸಿದರು. ಹಿಂದಿನ ಬಿಜೆಪಿ ಸರಕಾರದ ಮೇಲಿನ ಅಪಪ್ರಚಾರವನ್ನು ನಾವು ಸರಿಯಾಗಿ ನಿಭಾಯಿಸಿಲ್ಲ; ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಅದರ ಪರಿಣಾಮವಾಗಿ ವಿಪಕ್ಷದಲ್ಲಿದ್ದೇವೆ. ಅದರ ಬಗ್ಗೆ ನೋವಿಲ್ಲ ಎಂದು ಹೇಳಿದರು.

ಜನಾಕ್ರೋಶ ಯಾತ್ರೆ

ರಾಜ್ಯದಲ್ಲಿ ತೀವ್ರ ಬೆಲೆ ಏರಿಕೆ ಮತ್ತು ಸರ್ಕಾರಿ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ 4 ಮೀಸಲಾತಿ, ಪರಿಶಿಷ್ಟ ಜಾತಿ, ಜನಾಂಗದ ಅಭ್ಯುದಯಕ್ಕೆ ಮೀಸಲಿಟ್ಟ ಎಸ್‍ಇಪಿ, ಟಿಎಸ್‍ಪಿ ಹಣ ದುರ್ಬಳಕೆ- ಇವೆಲ್ಲವನ್ನೂ ರಾಜ್ಯದ ಜನತೆ ಮುಂದೆ ತೆಗೆದುಕೊಂಡು ಹೋಗುತ್ತೇವೆ. ನಿನ್ನೆ ಆರಂಭವಾದ ಅಹೋರಾತ್ರಿ ಧರಣಿಯ ಹೋರಾಟವು ಏ.7ರಿಂದ ಪ್ರಾರಂಭವಾಗುವ ಜನಾಕ್ರೋಶ ಯಾತ್ರೆ ಮೂಲಕ ರಾಜ್ಯದ ಪ್ರತಿ ಜಿಲ್ಲೆಗೆ ತಲುಪಲಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರದ ಹಗಲುದರೋಡೆಯನ್ನು ಜನರಿಗೆ ಮನದಟ್ಟು ಮಾಡುತ್ತೇವೆ. ಜನರ ಹಣ ಲೂಟಿ ಮಾಡಿ, ಜನರಿಗೆ ಬರೆ ಎಳೆದು ಅಧಿಕಾರ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ದೋಖಾಗಳನ್ನು ಜನರ ಮುಂದಿಡಲಿದ್ದೇವೆ ಎಂದು ಹೇಳಿದರು. ಈ ಸರ್ಕಾರದ ನೈಜ ಮುಖವಾಡವನ್ನು ಜನರು ಮುಂದೆ ಬಯಲುಗೊಳಿಸುವ ಕೆಲಸವನ್ನು ಮುಂದಿನ ಒಂದು ತಿಂಗಳು ಮಾಡಲಿದ್ದೇವೆ ಎಂದರು.

ವಕ್ಫ್ ಹಗರಣದಲ್ಲಿ ಕಾಂಗ್ರೆಸ್ ಕೈವಾಡ

ವಕ್ಫ್ ಹಗರಣದಲ್ಲಿ ಕಾಂಗ್ರೆಸ್ಸಿನ ಅನೇಕ ಮುಖಂಡರ ಹೆಸರು ಕೇಳಿ ಬಂದಿದೆ. ಕಾಂಗ್ರೆಸ್ಸಿಗರು ವಕ್ಫ್ ಹೆಸರು ಹೇಳಿ ಲಕ್ಷಾಂತರ ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದವರು; ಇದಕ್ಕೆ ಕರ್ನಾಟಕವೇ ತಾಜಾ ಉದಾಹರಣೆ. ಈ ಹಗರಣದಲ್ಲಿ ಕಾಂಗ್ರೆಸ್ಸಿನ ಅನೇಕ ಮುಖಂಡರ ಹೆಸರು ಕೂಡ ಈ ಹಿಂದೆಯೂ ಕೇಳಿಬಂದಿತ್ತು.

ಹಾಗಾಗಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಕಾಂಗ್ರೆಸ್ಸಿನವರು ಸಹಜವಾಗಿಯೇ ವಿರೋಧಿಸುತ್ತಾರೆ. ಏಕಾಏಕಿ ವಕ್ಫ್ ಹೆಸರು ಹೇಳಿಕೊಂಡು ಸಾವಿರಾರು ವರ್ಷಗಳ ಇತಿಹಾಸ ಇರುವ ಮಠಮಾನ್ಯಗಳ, ದೇವಾಲಯಗಳ ಜಮೀನನ್ನು ವಶಕ್ಕೆ ಪಡೆಯುತ್ತಿದ್ದರು.

ನಮ್ಮ ರಾಜ್ಯದಲ್ಲೂ ರೈತರ ಜಮೀನು ಕಬ್ಜಾ ಮಾಡಿಕೊಂಡಿದ್ದಾರೆ. ಅದನ್ನು ಯಾರಿಗೂ ಪ್ರಶ್ನೆ ಮಾಡಲು ಅವಕಾಶ ಇಲ್ಲದಿದ್ದರೆ ಇದ್ಯಾವ ನ್ಯಾಯ? ನಾವು ಯಾವ ದೇಶದಲ್ಲಿದ್ದೇವೆ ಎಂದು ಬಿ.ವೈ.ವಿಜಯೇಂದ್ರ ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net