

ಸಾಗರ: ಸೊರಬ, ಸಾಗರ, ಸಿದ್ದಾಪುರ, ಹೊಸನಗರ, ಶಿಕಾರಿಪುರ 5 ತಾಲೂಕುಗಳನ್ನು ಒಳಗೊಂಡು ಸಾಗರವನ್ನು ಜಿಲ್ಲೆಯನ್ನಾಗಿ ಮಾಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಪತ್ರ ಬರೆದಿದ್ದಾರೆ.
ಸಾಗರಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಕೆಳದಿ ಅರಸರು 265ಕ್ಕೂ ಹೆಚ್ಚು ವರ್ಷ ಉತ್ತಮ ಆಡಳಿತ ನೀಡಿದ್ದಾರೆ. ಕಂದಾಯ ಪದ್ಧತಿಯಲ್ಲಿ ಶಿಸ್ತನ್ನು ಶಿವಪ್ಪನಾಯಕ ಜಾರಿಗೆ ತಂದರೆ, 25ಕ್ಕೂ ಹೆಚ್ಚು ವರ್ಷಗಳ ಕಾಲ ಮಹಿಳೆಯೊಬ್ಬರು ಆಡಳಿತ ನೀಡಿದ ಕೀರ್ತಿ ಕೆಳದಿ ರಾಣಿ ಚನ್ನಮ್ಮ ಅವರಿಗೆ ಸಲ್ಲುತ್ತದೆ. ಮರಾಠ ದೊರೆ ಶಿವಾಜಿ ಪುತ್ರ ರಾಜಾರಾಮನಿಗೆ ಆಶ್ರಯ ನೀಡಿದ ಕೀರ್ತಿ ಸಹ ರಾಣಿ ಚನ್ನಮ್ಮಾಜಿಯದು.ಕ್ರಾಂತಿಕಾರಕ ಕಾಗೋಡು ಸತ್ಯಾಗ್ರಹದ ಮೂಲಕ ದೇಶದ ಗಮನ ಸೆಳೆದದ್ದು ಸಾಗರ ತಾಲೂಕಿನ ಹೆಗ್ಗಳಿಕೆ ಎಂದು ತಿಳಿಸಿದ್ದಾರೆ.
ವಿಶ್ವವಿಖ್ಯಾತ ಜೋಗ ಜಲಪಾತ, ಲಿಂಗನಮಕ್ಕಿ ಅಣೆಕಟ್ಟು, ಸಿಗಂದೂರು ಚೌಡೇಶ್ವರಿ, ವರದಹಳ್ಳಿ, ಕೆಳದಿ, ಇಕ್ಕೇರಿ ಸೇರಿದಂತೆ ಐತಿಹಾಸಿಕ ಮತ್ತು ಧಾರ್ಮಿಕ, ಪ್ರೇಕ್ಷಣೀಯ ಸ್ಥಳಗಳು ಸಾಗರದ ಕೀರ್ತಿಯನ್ನು ಹೆಚ್ಚಿಸಿವೆ. ವರದಾ, ಶರಾವತಿ ನದಿ ಹಾದು ಹೋಗಿರುವ ಸಾಗರ ತಾಲೂಕು ಅಡಕೆ ಬೆಳೆಯ ಮೂಲಕ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಭತ್ತ, ತೆಂಗು, ಜೋಳ. ಬಾಳೆ, ಶುಂಠಿಯನ್ನೂ ಅತಿ ಹೆಚ್ಚು ಬೆಳೆಯಲಾಗುತ್ತದೆ.
ಹೊಸನಗರ, ಸೊರಬ, ಶಿಕಾರಿಪುರ ತಾಲೂಕುಗಳನ್ನು ಒಳಗೊಂಡ ಸಾಗರ ಉಪವಿಭಾಗೀಯ ಕೇಂದ್ರ. ಈ ಎಲ್ಲ ತಾಲೂಕುಗಳು ಸಾಗರಕ್ಕೆ ಸಮೀಪದಲ್ಲಿವೆ. ಶಿವಮೊಗ್ಗ ಜಿಲ್ಲಾ ಕೇಂದ್ರ ತಲುಪಲು 70ರಿಂದ 80 ಕಿ.ಮೀ ಕ್ರಮಿಸಬೇಕು. ಸಾಗರ ತಾಲೂಕಿನಲ್ಲಿ 3 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದೆ. 3 ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗಿವೆ. ಮೈಸೂರು, ಬೆಂಗಳೂರಿಗೆ ರೈಲ್ವೆ ಸಂಪರ್ಕ ಸಹ ಹೊಂದಿದೆ. ಸುಸಜ್ಜಿತ ಆಸ್ಪತ್ರೆ, ಜಿಲ್ಲಾ ಸೆಷನ್ಸ್ ನ್ಯಾಯಾಲಯ, ತಾಯಿ-ಮಗು ಆಸ್ಪತ್ರೆ, ಪ್ರಥಮದರ್ಜೆ ಕಾಲೇಜು, ಪದವಿಪೂರ್ವ ಕಾಲೇಜು ಎಲ್ಲವೂ ಹೊಂದಿದೆ. ಈ ಹಿನ್ನೆಲೆಯಲ್ಲಿ ಸಾಗರವನ್ನು ನೂತನ ಜಿಲ್ಲೆಯನ್ನಾಗಿ ಮಾಡಲು ಶಾಸಕ ಬೇಳೂರು ಒತ್ತಾಯಿಸಿದ್ದಾರೆ.