

ತಿರುವನಂತಪುರಂ: ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ, ಕಾರ್ಗಿಲ್ ಯುದ್ಧದ ಮುಖ್ಯ ರೂವಾರಿ ಪರ್ವೇಜ್ ಮುಷರಫ್ ಮೃತಪಟ್ಟು 4 ವರ್ಷಗಳಾಗಿದ್ದು, ಇದೀಗ ಕೇರಳದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ ಆಫ್ ಇಂಡಿಯಾದ ಸಿಬ್ಬಂದಿ ಶ್ರದ್ಧಾಂಜಲಿ ಸಲ್ಲಿಸಲು ನಿರ್ಧರಿಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಜುಲೈ 26ರಂದು ನಡೆದ ಕಾರ್ಗಿಲ್ ವಿಜಯೋತ್ಸವದ ಮಾರನೇ ದಿನ ಅಂದರೆ ಜುಲೈ 27ರಂದು ಕಮ್ಯೂನಿಸ್ಟ್ ಪಕ್ಷದ ಬೆಂಬಲಿತ ಬ್ಯಾಂಕ್ ಆಫ್ ಇಂಡಿಯಾ ನೌಕರರ ಸಂಘ ಅಲಪ್ಪುಳದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಈ ಕಾರ್ಯಕ್ರಮದಲ್ಲಿ ನಟರು, ಗಾಯಕರು, ನೃತ್ಯಗಾರರು, ಕ್ರೀಡಾಪಟುಗಳು, ಕಾರ್ಯಕರ್ತರು ಮತ್ತು ಇತರರನ್ನು ಒಳಗೊಂಡಂತೆ ಸನ್ಮಾನಿಸಲ್ಪಡುವ ವ್ಯಕ್ತಿಗಳ ಹೆಸರನ್ನು ಸಂಘ ಬಿಡುಗಡೆ ಮಾಡಿತ್ತು. ಮಲಯಾಳಂನಲ್ಲಿ ಆಹ್ವಾನ ಪತ್ರಿಕೆಯ ಶ್ರದ್ಧಾಂಜಲಿ ಸಲ್ಲಿಸುವ ಗಣ್ಯರ ಪಟ್ಟಿಯಲ್ಲಿ ಪರ್ವೇಜ್ ಮುಷರಫ್ ಹೆಸರನ್ನು ನಮೂದಿಸಲಾಗಿತ್ತು.
ಪರ್ವೇಜ್ ಮುಷರಫ್ಗೆ ಶ್ರದ್ಧಾಂಜಲಿ ಸಲ್ಲಿಸಲು ಆಹ್ವಾನ ಪತ್ರಿಕೆ ಪ್ರಿಂಟ್ ಮಾಡಿಸಿರುವ ವಿಚಾರ ತಿಳಿಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಬ್ಯಾಂಕ್ ಮುಂಭಾಗ ಪ್ರತಿಭಟನೆ ನಡೆಸಿದ್ದು, ಕೂಡಲೇ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದ್ದಾರೆ. ಪ್ರತಿಭಟನೆ ಜೋರಾಗುತ್ತಿದ್ದಂತೆ ಎಚ್ಚೆತ್ತ ಬ್ಯಾಂಕ್ ಸಿಬ್ಬಂದಿ ಮುದ್ರಣ ದೋಷದಿಂದ ಹೀಗಾಗಿದ್ದು, ಕೂಡಲೇ ಹೆಸರನ್ನು ತೆಗೆಯಲಾಗಿದೆ ಎಂದು ತಿಳಿಸಿದ್ದಾರೆ.
ಈ ಕಾರ್ಯಕ್ರಮವನ್ನು ಕಾಂಗ್ರೆಸ್ ಕಾರ್ಯದರ್ಶಿ, ರಾಹುಲ್ ಗಾಂಧಿ ಆಪ್ತ ಕೆ.ಸಿ. ವೇಣುಗೋಪಾಲ್ ಉದ್ಘಾಟಿಸಬೇಕಿತ್ತು. ಆದರೆ, ಅವರು ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಇತ್ತ ಈ ಸುದ್ದಿ ಹೊರಬರುತ್ತಿದ್ದಂತೆ ಜನರು ಕಿಡಿಕಾರಿದ್ದು, ಕೂಡಲೇ ತಪ್ಪಿತಸ್ಥ ಬ್ಯಾಂಕ್ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.