

ಜನಸಾಮಾನ್ಯರ ಸಂಕಷ್ಟಗಳು, ಯುವಕರ ತಳಮಳಗಳು, ಉದ್ಯೋಗಾಕಾಂಕ್ಷಿಗಳ ಸಮಸ್ಯೆಗಳು ಆಳುವವರಿಗೆ ಅರ್ಥವೇ ಆಗುವುದಿಲ್ಲವೇ? ಅಥವಾ ವ್ಯವಸ್ಥೆ ಎಂಬುದೇ ಸಂವೇದನೆಯನ್ನು ಕಳೆದುಕೊಳ್ಳುತ್ತಿದ್ದೆಯೇ? ಎಂಬ ಅನುಮಾನ ವ್ಯಾಪಕವಾಗುತ್ತಿರುವ ದಿನಗಳಿವು.
‘ವ್ಯವಸ್ಥೆಯ ಶುದ್ಧೀಕರಣ’ ಎಂಬುದು ಬರೀ ವೇದಿಕೆಯ ಭಾಷಣಗಳಿಗೆ ಸೀಮಿತವಾದರೆ ಏನು ಪ್ರಯೋಜನ? ಯಾವುದೇ ಪಕ್ಷದ ಸರ್ಕಾರ ಬಂದರೂ ‘ಭ್ರಷ್ಟಾಚಾರಮುಕ್ತ ಆಡಳಿತ ನೀಡುತ್ತೇವೆ’ ಎಂಬ ವಾಗ್ದಾನವನ್ನು ಆರಂಭೋತ್ಸಾಹದಲ್ಲಿ ಕೇಳುತ್ತೇವೆ. ಆದರೆ, ನಂತರದ ದಿನಗಳಲ್ಲಿ ಭ್ರಷ್ಟಾಚಾರದ ಹಲವು ಆಯಾಮಗಳನ್ನು ಮಣಿಸುವ ಪ್ರಯತ್ನಗಳೇ ಕಂಡುಬರುವುದಿಲ್ಲ. ಹಾಗಾಗಿ, ಕೆಲಸಕ್ಕಾಗಿ ಕಾಯುವ ಉದ್ಯೋಗಾಕಾಂಕ್ಷಿಗಳು, ಯುವ ಜನರು, ವಿವಿಧ ವಲಯದವರು ಸಂಕಷ್ಟಕ್ಕೆ ಈಡಾಗುವುದಷ್ಟೇ ಅಲ್ಲ ವ್ಯವಸ್ಥೆಯ ಮೇಲಿನ ನಂಬಿಕೆಯನ್ನೂ ಕಳೆದುಕೊಳ್ಳುತ್ತಾರೆ. ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತದೆ ಎಂಬ ಆರೋಪ ಹೊಸದೇನಲ್ಲ. ಆದರೂ, ಈ ಹಳೆಯ ಸಮಸ್ಯೆಗೆ ಪರಿಣಾಮಕಾರಿ ಪರಿಹಾರವನ್ನು ಕಂಡುಹಿಡಿಯಲು, ಪಾರದರ್ಶಕವಾಗಿ ನೇಮಕಾತಿಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಎಂಬುದು ದುರದೃಷ್ಟಕರ. ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಗಳು ಹಲವು ವರ್ಷಗಳ ಕಾಲ ನನೆಗುದಿಗೆ ಬಿದ್ದು, ಯಾವಾಗಲೋ ಒಮ್ಮೆ ಆರಂಭವಾಗುತ್ತವೆ. ಆರಂಭವಾದ ಮೇಲೂ ಅದಕ್ಕೆ ಅಡೆತಡೆಗಳು, ಸೃಷ್ಟಿ ಆಗುವ ವಿವಾದಗಳು ಒಂದೇರಡಲ್ಲ. ಅಷ್ಟೇ ಅಲ್ಲ, ಇಂಥ ಸಂದರ್ಭದಲ್ಲಿ ಹುಟ್ಟಿಕೊಳ್ಳುವ ದಲ್ಲಾಳಿಗಳು ನೇಮಕಾತಿ ಪ್ರಕ್ರಿಯೆಯನ್ನೇ ಹಳಿತಪ್ಪಿಸಿ ಬಿಡುತ್ತಾರೆ.
1,242 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಮಾರ್ಚ್ 12ರಿಂದ 16ರವರೆಗೆ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆಗಳು ಆರಂಭವಾಗುವ ಮುನ್ನವೇ ಭ್ರಷ್ಟತೆಯ ಕಾಮೋಡ ಕವಿದಿದ್ದು, 40-50 ಲಕ್ಷ ರೂಪಾಯಿಗೆ ನೇಮಕಾತಿ ‘ವ್ಯವಹಾರ’ ಕುದುರಿಸುವ ದಲ್ಲಾಳಿಗಳು ಹುಟ್ಟಿಕೊಂಡಿರುವ ಬಗ್ಗೆ ಅಭ್ಯರ್ಥಿಗಳೇ ಗಂಭೀರ ಆರೋಪ ಮಾಡಿದ್ದಾರೆ. ಪ್ರಾಮಾಣಿಕವಾಗಿ ವ್ಯಾಸಂಗ ಮಾಡಿ, ಪ್ರತಿಭೆ ಆಧಾರದಲ್ಲಿ ಉದ್ಯೋಗ ಪಡೆಯಲು ಯತ್ನಿಸುತ್ತಿರುವವರು ಈ ಬೆಳವಣಿಗೆಯಿಂದ ಆತಂಕಗೊಂಡಿದ್ದಾರೆ. ಅಲ್ಲದೆ, ಈ ಹಿಂದೆ ಈ ರೀತಿಯ ನೇಮಕಾತಿಗಳ ವೇಳೆ ದುಡ್ಡು ಕೊಟ್ಟು ಮೋಸ ಹೋದ ಅಭ್ಯರ್ಥಿಗಳ ಸಂಖ್ಯೆಯೂ ಕಡಿಮೆಯೇನಲ್ಲ. ಕರ್ನಾಟಕ ಲೋಕ ಸೇವಾ ಆಯೋಗವಂತೂ ಕಳೆದ ಕೆಲವು ವರ್ಷಗಳಿಂದ ಅಕ್ರಮ, ಅದಕ್ಷತೆ, ಭ್ರಷ್ಟಾಚಾರದಿಂದ ನಂಬಿಕೆಯನ್ನೇ ಕಳೆದುಕೊಂಡಿದೆ.
2011ನೇ ಸಾಲಿನ ನೇಮಕಾತಿ ಪ್ರಕ್ರಿಯೆ ಮುನ್ನ ಮತ್ತು ಆನಂತರವೂ ಅಕ್ರಮಗಳು ನಡೆದಿರುವುದು ಗೊತ್ತಿರುವಂಥದ್ದೇ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೂಡ ಈಗ ಜಾಣಮೌನ ವಹಿಸಿರುವುದು ಉದ್ಯೋಗಾಕಾಂಕ್ಷಿಗಳಲ್ಲಿ ಬೇಸರ ಮೂಡಿಸಿದೆ. ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಏಜೆಂಟರು ದುಡ್ಡು ಕೇಳುತ್ತಿರುವ ಬಗ್ಗೆ ಮಾಹಿತಿ ನೀಡಲು ಆಭ್ಯರ್ಥಿಗಳು ಪರೀಕ್ಷಾ ಪ್ರಾಧಿಕಾರದ ಸಹಾಯವಾಣಿಗೆ ಕರೆ ಮಾಡಿದರೂ, ಅಲ್ಲಿ ಯಾರೂ ಸ್ಪಂದಿಸದಿರುವುದು ಅಧಿಕಾರಶಾಹಿಯ ನಿರ್ಲಕ್ಷ್ಯಕ್ಕೆ ಸಾಕ್ಷಿ. ಇಬ್ಬಗೆಯ ಧೋರಣೆ ಗಳಿಂದ ಕರ್ನಾಟಕ ಲೋಕ ಸೇವಾ ಆಯೋಗ ಅಥವಾ ಇತರ ಸಂಸ್ಥೆಗಳ ಶುದ್ಧೀಕರಣ ಸಾಧ್ಯವಿಲ್ಲ. ಇದಕ್ಕಾಗಿ ಬಲವಾದ ಇಚ್ಛಾಶಕ್ತಿ ಬೇಕು. ನೇಮಕಾತಿಗಳು ಪಾರದರ್ಶಕವಾಗಿ ನಡೆಯುವಂಥ ವ್ಯವಸ್ಥೆ ರೂಪಿಸುವುದು ಕಷ್ಟವೇನಲ್ಲ. ಆದರೆ, ಹಾಗಾಗದಂತೆ ತಡೆಯೊಡ್ಡುತ್ತಿರುವ ಶಕ್ತಿಗಳನ್ನು ಸರ್ಕಾರ ನಿಯಂತ್ರಿಸಿ, ಉದ್ಯೋಗಾಕಾಂಕ್ಷಿಗಳನ್ನು ನಿರಾಳಗೊಳಿಸಬೇಕು.