

ಹೊಸನಗರ: ಪ್ರತಿಯೊಬ್ಬ ವಿದ್ಯಾರ್ಥಿ ಶಿಕ್ಷಣದ ನಂತರ ತಾವು ಓದಿದ ಕಾಲೇಜಿನ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು. ಜತೆಗೆ ನಿರಂತರವಾಗಿ ಆ ಕಾಲೇಜಿನೊಂದಿಗೆ ಸಂಪರ್ಕವನ್ನು ಹೊಂದಿರಬೇಕು ಇದು ಆ ಕಾಲೇಜಿನ ಏಳಿಗೆಗೆ ಸಹಕಾರಿಯಾಗಲಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಹೊಸನಗರ ಕೊಡಚಾದ್ರಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ವೇದಿಕೆ, ಎನ್‌ಎಸ್‌ಎಸ್, ರೇಂಜರ್ಸ್ ಮತ್ತು ರೋವರ್ಸ್, ಕ್ರೀಡಾ ಚಟುವಟಿಕೆ, ಯುವ ರೆಡ್‌ಕ್ರಾಸ್ ಘಟಕಗಳ ಸಮಾರೋಪ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಪಠ್ಯದ ಜತೆಗೆ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡಬೇಕು. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬಹುದಾದ ಅವಕಾಶಗಳು ದೊರೆಯುತ್ತಿವೆ. ವಿದ್ಯಾರ್ಥಿ ಜೀವನದಲ್ಲಿ ತುಂಟಾಟ ಸಹಜ. ಆದರೆ ಉತ್ತಮ ಭವಿಷ್ಯದ ಕಡೆಗೂ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಿಗೆ ಸಂಯಮ, ಶಿಸ್ತು ಇರಬೇಕು. ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಳ್ಳಬೇಕು. ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಸಹಕಾರಿ. ಶಿಕ್ಷಣ ಪಡೆದ ನಂತರ ಎಷ್ಟೇ ದೊಡ್ಡ ಹುದ್ದೆಯನ್ನು ಅಲಂಕರಿಸಿದರೂ ತನಗೆ ವಿದ್ಯೆ ಕಲಿಸಿದ ಗುರುಗಳನ್ನು ಎಂದಿಗೂ ಗೌರವಿಸಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಡಾ. ಕೆ.ಉಮೇಶ್, ಸಿಡಿಸಿ ಉಪಾಧ್ಯಕ್ಷ ಮಾಸ್ತಿಕಟ್ಟೆ ಸುಬ್ರಮಣ್ಯ, ಗ್ರಾಪಂ ಸದಸ್ಯ ಮಹೇಂದ್ರ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಅಶ್ವಿನಿಕುಮಾರ್ ಇತರರಿದ್ದರು.