ವ್ಯಸನಮುಕ್ತ ಜಿಲ್ಲೆ ನಿರ್ಮಾಣಕ್ಕೆ ಸಹಕರಿಸಿ

dc meeting
ಕೋಲಾರ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಎನ್​ಸಿಒಆರ್​ಡಿ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಮಾತನಾಡಿದರು. ಬಿ.ನಿಖಿಲ್​, ಶಾಂತರಾಜು, ಪ್ರವಿನ್​ ಪಿ.ಬಾಗೇವಾಡಿ, ಡಾ.ಮೈತ್ರಿ ಇದ್ದರು.
Published on

ಕೋಲಾರ: ಮಾದಕ ವಸ್ತುಗಳ ಸೇವನೆಗೆ ಒಳಗಾಗುವುದರಿಂದ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಆ ಮೂಲಕ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಎನ್​ಸಿಒಆರ್​ಡಿ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ಮಾದಕ ವಸ್ತುಗಳ ಸಾಗಣೆ, ಮಾರಾಟ ಹಾಗೂ ಅವುಗಳ ಬಳಕೆಯಾಗುವುದನ್ನು ಸಂಪೂರ್ಣ ನಿಯಂತ್ರಿಸಲು ಇಲಾಖೆಗಳು ಕಾರ್ಯನಿರ್ವಹಿಸಬೇಕು ಎಂದರು.

ಮಾದಕ ದುಶ್ಚಟಗಳಿಗೆ ಯುವ ಸಮುದಾಯ ಹೆಚ್ಚು ಆಕರ್ಷಿತವಾಗುತ್ತಿದೆ. ಅವುಗಳ ಬಳಕೆಯಿಂದ ದೇಹದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು. ದೂರ ಉಳಿಯುವಂತೆ ನೋಡಿಕೊಳ್ಳಲು ಜಾಗೃತಿ ಕಾರ್ಯಕ್ರಮಗಳು ಹಾಗೂ ವಿವಿಧ ಸ್ಪರ್ಧೆಗಳನ್ನು ವಿದ್ಯಾಸಂಸ್ಥೆಗಳಲ್ಲಿ ಮಾಡಬೇಕು ಎಂದು ತಿಳಿಸಿದರು.

ತಂಬಾಕು ಉತ್ಪನ್ನಗಳು ಸೇರಿ ಮಾದಕ ವಸ್ತುಗಳ ದುಶ್ಚಟಗಳಿಗೆ ಕಾರ್ಮಿಕರು ಸಹ ವ್ಯಸನಿಗಳಾಗುತ್ತಿದ್ದಾರೆ. ಅವರಿಗೂ ಸಹ ಅರಿವು ಮೂಡಿಸುವುದು ಸೇರಿ ಮನಪರಿವರ್ತಿತ ಕಾರ್ಯಕ್ರಮಗಳನ್ನು ಕಾರ್ಮಿಕ ಇಲಾಖೆಯ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಸ್ಥಳಗಳಲ್ಲಿ ಹಮ್ಮಿಕೊಂಡು ದೂರ ಉಳಿಯುವ ಹಾಗೆ ನೋಡಿಕೊಳ್ಳಬೇಕು ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆಯ ಸಿಬ್ಬಂದಿ ಆಗಿಂದಾಗ್ಗೆ ಕೃಷಿ ಜಮೀನುಗಳು, ತೋಟಗಳಿಗೆ ಭೇಟಿ ನೀಡಿ, ಗಾಂಜಾ ಬೆಳೆಗಳನ್ನು ಬೆಳೆಯುತ್ತಿದ್ದಾರಾ ಎಂಬ ಬಗ್ಗೆ ಪರಿಶೀಲಿಸಬೇಕು. ಅಂಚೆ ಇಲಾಖೆಯ ಪಾರ್ಸೆಲ್​ಗಳಲ್ಲಿ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿರುವ ಬಗ್ಗೆ ಯಾವುದೇ ದೂರುಗಳು ಕಂಡುಬರುತ್ತಿಲ್ಲ. ಅದೇ ರೀತಿ ಖಾಸಗಿ ಪಾರ್ಸೆಲ್​ ಸರ್ವೀಸ್​ಗಳ ಕಚೇರಿ, ಆನ್​ಲೈನ್​ ಮಾರುಕಟ್ಟೆಯ ಗೋದಾಮುಗಳನ್ನು ಪರಿಶೀಲಿಸಬೇಕು. ರೈಲ್ವೆ ಇಲಾಖೆಯ ಸಿಬ್ಬಂದಿ ಸಹ ನಿಲ್ದಾಣದಲ್ಲಿ ಮಾದಕ ವಸ್ತುಗಳ ಸರಬರಾಜು ಬಗ್ಗೆ ನಿಗಾ ವಹಿಸಬೇಕು. ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಅವರ ಬಗ್ಗೆ ತನಿಖೆ ಮಾಡಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಬಿ.ನಿಖಿಲ್​ ಮಾತನಾಡಿ, ರ್ನಿಬಂಧಿತ ಮತ್ತು ಮತ್ತು ಬರಿಸುವ ಔಷಧಗಳು ಜನ ಸಾಮಾನ್ಯರೆಲ್ಲರಿಗೂ ಮಾರಾಟ ಮಾಡುವ ಹಾಗಿಲ್ಲ. ಈ ಬಗ್ಗೆ ಜಿಲ್ಲೆಯ ಔಷಧ ನಿಯಂತ್ರಣ ಅಧಿಕಾರಿಗಳು ಔಷಧ ಅಂಗಡಿಗಳ ಬಗ್ಗೆ ಎಚ್ಚರವಹಿಸಬೇಕು ಎಂದು ತಿಳಿಸಿದರು.

ಜಿಲ್ಲೆಯ ಎಲ್ಲ ಶಾಲಾ&ಕಾಲೇಜುಗಳಲ್ಲಿ ಮಾದಕ ದ್ರವ್ಯ ನಿಯಂತ್ರಣ ತಂಡಗಳನ್ನು ರಚಿಸಿ ವಿದ್ಯಾರ್ಥಿಗಳಿಗೆ ಮತ್ತು ಅವರ ಪಾಲಕರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಕಾಲೇಜು ವಿದ್ಯಾರ್ಥಿ ನಿಲಯಗಳಲ್ಲಿ ರಜೆಯ ದಿನಗಳಲ್ಲಿ ಮನೆಗಳಿಗೆ ಹೋಗಿ ನಂತರ ಹಾಸ್ಟೆಲ್​ಗಳಿಗೆ ಮರಳಿ ಬರುವ ಸಂದರ್ಭದಲ್ಲಿ ಅವರು ಯಾವುದಾದರೂ ಮಾದಕ ವಸ್ತುಗಳನ್ನು ಏನಾದರೂ ತೆಗೆದುಕೊಂಡು ಬರುತ್ತಿದ್ದಾರಾ ಎಂಬುದರ ಮೇಲೆ ನಿಗಾ ಇಡಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವಿಣ್​.ಪಿ.ಬಾಗೇವಾಡಿ, ಕೆಜಿಎಫ್​ ಜಿಲ್ಲಾ ಪೊಲೀಸ್​ ವರಿಷ್ಠ್ಠಾಧಿಕಾರಿ ಶಾಂತರಾಜು, ಉಪ ವಿಭಾಗಾಧಿಕಾರಿ ಡಾ.ಮೈತ್ರಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶ್ರೀನಿವಾಸ, ಸಮಾಜ ಕಲ್ಯಾಣ ಅಧಿಕಾರಿ ಶ್ರೀನಿವಾಸನ್​ ಮತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net