

ಬೆಂಗಳೂರು: ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ನೊಂದ ಕುಟುಂಬಕ್ಕೆ ನ್ಯಾಯ, ನಿಷ್ಪಕ್ಷಪಾತ ತನಿಖೆಗಾಗಿ ಸಿಬಿಐಗೆ ಒಪ್ಪಿಸಲು ರಾಜ್ಯ ಸರ್ಕಾರಕ್ಕೆ ಜನವರಿ 3ರ ಗಡುವು ವಿಧಿಸುತ್ತಿದ್ದೇವೆ. ಸಿಎಂ ಸಿದ್ದರಾಮಯ್ಯ ಸ್ಪಂದಿಸದಿದ್ದರೆ ಜ.4ರಂದು ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಸಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿನ್ ಕುಟುಂಬ ವರ್ಗದವರಿಗೆ ಭಾನುವಾರ ಭೇಟಿ ಮಾಡಿ ಸಾಂತ್ವನ ಹೇಳಿ, ಮಾಹಿತಿ ಪಡೆದುಕೊಂಡಿದ್ದೇವೆ. ಅತ್ಯಂತ ಬಡ ಕುಟುಂಬ ಭಯದಲ್ಲಿದೆ. ಸಚಿನ್ ಆತ್ಮಹತ್ಯೆಗೆ ಕಾರಣರಾದ ರಾಜು ಕಪನೂರು ಅತ್ಯಂತ ಪ್ರಭಾವಶಾಲಿ, ಸಚಿವ ಪ್ರಿಯಾಂಕ್ ಖರ್ಗೆ ಪರಮಾಪ್ತರಾಗಿದ್ದಾರೆ.
ರಾಜ್ಯ ಪೊಲೀಸರಿಂದ ನಿಷ್ಪಕ್ಷಪಾತ ತನಿಖೆ ಅಸಾಧ್ಯ, ನ್ಯಾಯ ಸಿಗುವುದಿಲ್ಲ ಎಂದು ಕುಟುಂಬ ಅನುಮಾನ, ಆತಂಕ ವ್ಯಕ್ತಪಡಿಸಿದೆ. ಕೂಡಲೇ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯಬೇಕು, ಸಿಬಿಐ ತನಿಖೆಗೆ ಆದೇಶಿಸಬೇಕು, ಭಯಗ್ರಸ್ತರಾಗಿರುವ ಕುಟುಂಬಕ್ಕೆ ಭದ್ರತೆ, ಒಂದು ಕೋಟಿ ರೂ ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.
12 ಕೋಟಿ ರೂ. ಮೊತ್ತದ ಟೆಂಡರ್ ಕೊಡಿಸುವುದಾಗಿ ರಾಜು ಕಪನೂರು ಒಂದು ಕೋಟಿ ರೂ ಕಮಿಷನ್ ಗೆ ಬೇಡಿಕೆಯಿಟ್ಟು, ಪದೇ ಪದೆ ಕಿರುಕುಳ ಹಾಗೂ ಬೆದರಿಕೆಗೆ ಹೆದರಿ ಸಚಿನ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅದಕ್ಕೂ ಮುನ್ನ ಏಳು ಪುಟಗಳ ಡೆತ್ ನೋಟ್ ನ್ನು ಸಾಮಾಜಿಕ ಜಾಲತಾಣದಲ್ಲಿ ಅಪಲೋಡ್ ಮಾಡಿದ್ದಾರೆ. ಇದನ್ನು ಗಮನಿಸಿದ ಕುಟಂಬದವರು ಗಾಬರಿಯಾಗಿ ಪೊಲೀಸರ ಮೊರೆ ಹೋದರೂ ಸ್ಪಂದಿಸಿಲ್ಲ. ಪೊಲೀಸ್ ಅಧಿಕಾರಿಗಳ ಲೋಪವಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ಒಪ್ಪಿದ್ದಾರೆ.
ರಿಪಬ್ಲಿಕ್ ಆಫ್ ಕಲಬುರಗಿಯಲ್ಲಿ ಎಲ್ಲ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ. ಪೊಲೀಸ್ ವ್ಯವಸ್ಥೆ ಪೂರ್ತಿ ಖರ್ಗೆ ಕುಟುಂಬದ ಹಿಡಿತದಲ್ಲಿವೆ. ಕೊಲೆ, ಸುಲಿಗೆ, ಅತ್ಯಾಚಾರ, ಗೂಂಡಾಗಿರಿ, ದೌರ್ಜನ್ಯ ಪ್ರಕರಣಗಳು ಮುಚ್ಚಿ ಹೋಗಿವೆ. ರಾಜು ಕಪನೂರು ಮತ್ತು ಗ್ಯಾಂಗ್ ರೌಡಿ ಪಡೆಯಾಗಿದೆ ಎಂದು ಬಿ.ವೈ.ವಿಜಯೇಂದ್ರ ಆರೋಪಿಸಿದರು.
ಡೆತ್ ನೋಟ್ ನಲ್ಲಿ ನಾಲ್ವರ ಕೊಲೆಗೆ ಸಂಚು, ಸುಪಾರಿ ವಿಷಯ ಪ್ರಸ್ತಾಪವಾಗಿರುವ ಕಾರಣ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದೇವೆ. ನಾನೇಕೆ ರಾಜೀನಾಮೆ ಕೊಡಬೇಕು ? ಎಂದು ಪ್ರಿಯಾಂಕ್ ಖರ್ಗೆ ಕೇಳುತ್ತಿದ್ದಾರೆ. ಈ ಹಿಂದೆ ಈಶ್ವರಪ್ಪ ಕೇಸ್ ನಲ್ಲಿ ಏನೆಲ್ಲ ಕಾನೂನು-ಕಟ್ಟಳೆ, ಮಾನವೀಯತೆ ಬಗ್ಗೆ ಹೇಳಿದರು ಎಂಬುದನ್ನು ನೆನಪಿಸುವೆ.
ಅಧಿಕಾರದ ಅಹಂಕಾರದಿಂದ ಪ್ರಿಯಾಂಕ್ ಹೊರ ಬಂದು, ಆ ಕುಟುಂಬದವರನ್ನು ಭೇಟಿಯಾಗಿ ಧೈರ್ಯತುಂಬುವ ಕನಿಷ್ಠ ಮಾನವೀಯತೆ ತೋರಿಸಬೇಕು. ಆತ್ಮಹತ್ಯೆಗೆ ಶರಣಾಗಿರುವ ಸಚಿನ್ ಪಾಂಚಾಳ್ ಹಿಂದುಳಿದ ವರ್ಗಕ್ಕೆ ಸೇರಿದ ಬಡವರಾಗಿದ್ದಾರೆ. ಹಿಂದುಳಿದ ವರ್ಗಗಳ ಚಾಂಪಿಯನ್ ಎಂದು ಬಿಂಬಿಸಿಕೊಳ್ಳುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ನೊಂದ ಕುಟುಂಬ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಬಿ.ವೈ.ವಿಜಯೇಂದ್ರ ಸವಾಲು ಹಾಕಿದರು.