

ಬೆಂಗಳೂರು:
ರಾಜ್ಯ ಸರಕಾರದ ವಿರುದ್ಧ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿರುವ ಶೇ.40 ಕಮಿಷನ್ ಆರೋಪದ ಕುರಿತಂತೆ ಜಸ್ಟಿಸ್ ನಾಗಮೋಹನದಾಸ್ ಸಮಿತಿಯು ಸ್ವಯಂಪ್ರೇರಿತ ತನಿಖೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಅಶ್ವತ್ಥನಾರಾಯಣ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಸರಕಾರದ ಅವ್ಯವಹಾರ ಕುರಿತು ನ್ಯಾಯಮೂರ್ತಿ ನಾಗಮೋಹನದಾಸ್ ಸಮಿತಿ ಮೂಲಕ ತನಿಖೆ ಮಾಡಿಸುವುದಾಗಿ ಕಾಂಗ್ರೆಸ್ ಸರಕಾರ ಹೇಳಿದೆ. ಹಾಗೆಯೇ ಕೆಂಪಣ್ಣ ಮಾಡಿದ ಆರೋಪಗಳ ಬಗ್ಗೆ ಸ್ವಯಂಪ್ರೇರಿತ ತನಿಖೆ ಮಾಡಲಿ ಎಂದರು.
ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಎದ್ದಿದೆ. ಆಡಳಿತ ಪಕ್ಷದ ಸಚಿವರು, ಶಾಸಕರು ಮುಖ್ಯಮಂತ್ರಿಗಳ ವಿರುದ್ಧ ಮತ್ತು ಸರಕಾರದ ವಿರುದ್ಧ ಹೈಕಮಾಂಡಿಗೆ ಪತ್ರ ಬರೆದು ದೂರು ನೀಡಿದ್ದಾರೆ ಎಂದರು.
ಆಡಳಿತ ಪಕ್ಷದ ಶಾಸಕರಿಗೆ ಅಭಿವೃದ್ಧಿ ಕಾಮಗಾರಿಗಳಿಗೆ ನೀಡಲು ಈ ಸರಕಾರದಲ್ಲಿ ಹಣ ಇಲ್ಲ. ರಾಜಸ್ವ ತೆರಿಗೆ ಸಂಗ್ರಹದಲ್ಲೂ ಸರಕಾರ ಹಿಂದೆ ಬಿದ್ದಿದೆ. ದಿವಾಳಿ ಎದ್ದ ಸರಕಾರದಲ್ಲಿ ಬೆಂಕಿ ಬಿದ್ದ ಮನೆಯಲ್ಲಿ ಗಳ ಹಿಡಿಯಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಕೆಂಪಣ್ಣರನ್ನು ಬಳಸಿಕೊಂಡು ಬಿಜೆಪಿ ಸರಕಾರದ ವಿರುದ್ಧ ಪ್ರಧಾನಿಗಳಿಗೆ ಪತ್ರ ಬರೆಸಿ ಪೇ ಸಿಎಂ ಪೋಸ್ಟರ್ ಹಾಕಿಸಿದ್ದರು. ಅದೇ ಕೆಂಪಣ್ಣ ಇವತ್ತು ಈ ಸರಕಾರ, ಸರಕಾರದ ಆಡಳಿತಶಾಹಿ ವಿರುದ್ಧ ನೇರ ಆರೋಪ ಮಾಡಿದ್ದಾರೆ. ಈ ಸರಕಾರದ ಜವಾಬ್ದಾರಿ ಹೊತ್ತ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರೇ ಇದಕ್ಕೆ ನೇರ ಹೊಣೆ ಎಂದರು.
ತೆಲಂಗಾಣ ಚುನಾವಣೆ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯವು ದಾಳಿ ಮಾಡಿದಾಗ ನೂರಾರು ಕೋಟಿ ಹಣ ಸಿಕ್ಕಿತ್ತು. ಕರ್ನಾಟಕದ ಗುತ್ತಿಗೆದಾರರ ಹಣವನ್ನು ತೆಲಂಗಾಣದಲ್ಲಿ ಹಂಚಿದ್ದು ತಮಗೆಲ್ಲರಿಗೂ ತಿಳಿದಿದೆ ಎಂದು ಹೇಳಿದರು.
ತಮ್ಮ ಮೇಲಿನ ಆಪಾದನೆ, ಸರಕಾರದ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಕೇಂದ್ರ ಸರಕಾರದ ವಿರುದ್ಧವಾಗಿ ಎಲ್ಲ ಭಾಜಾ ಭಜಂತ್ರಿಗಳ ಜೊತೆ ದೆಹಲಿಯಲ್ಲಿ ಹೋಗಿ ಸತ್ಯಾಗ್ರಹ ಕುಳಿತಿದ್ದು ಸಿದ್ದರಾಮಯ್ಯನವರ ನಾಟಕ. ಈ ನಾಟಕಕ್ಕೆ ಉತ್ತರವನ್ನು ಜನರು ಚುನಾವಣೆಯಲ್ಲಿ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.