

ಶಿವಮೊಗ್ಗ: ಯಾವುದೇ ಕ್ಷೇತ್ರದಲ್ಲಿ ಸಾಧನೆಗೆ ಒಳದಾರಿಗಳು ಇರುವುದಿಲ್ಲ. ಹೆಚ್ಚಿನ ಪರಿಣತಿ ಪಡೆಯಲು, ಏನನ್ನಾದರೂ ಸಾಧಿಸಲು ನಿರಂತರ ಅಭ್ಯಾಸ ಅಗತ್ಯ ಎಂದು ಸುಗಮ ಸಂಗೀತ ಗಾಯಕಿ ಸುರೇಖಾ ಹೆಗಡೆ ಅಭಿಪ್ರಾಯಪಟ್ಟರು.
ಭಾವಸಾರ ಕ್ಷತ್ರಿಯ ಮಹಾಜನ ಸಮಾಜ ಹಾಗೂ ಭಾವಸಾರ ಕ್ಷತ್ರಿಯ ಯುವಕ ಸಂಘದಿಂದ ಭಾನುವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಸ್ವರ ಸುಮನ ಎಂಬ ಬಿರುದು ಹಾಗೂ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಾಧನೆ ಮಾಡಲು ನಿರಂತರ ಶ್ರದ್ಧೆ, ಏಕಾಗ್ರತೆ, ಅಚಲ ಮನಸ್ಸಿರಬೇಕು ಎಂದು ಹೇಳಿದರು.
ಅನೇಕ ಪಾಲಕರು ಇತ್ತೀಚಿನ ದಿನಗಳಲ್ಲಿ ತಮ್ಮ ಮಕ್ಕಳಿಗೆ ಸಂಗೀತಾಭ್ಯಾಸ ಮಾಡಿಸಲು ದುಂಬಾಲು ಬೀಳುತ್ತಾರೆ. ಒಂದೆರೆಡು ತಿಂಗಳಲ್ಲೇ ಯಾವುದಾದರೂ ರಿಯಾಲಿಟಿ ಶೋನಲ್ಲಿ ಹಾಡಬಹುದಾ ಎಂದು ಕೇಳುತ್ತಾರೆ. ಇದು ಶೋಚನೀಯ ಸ್ಥಿತಿ. ಇಂದಿನವರು ಆತುರವಾಗಿ ಕಲಿಯಲು ಹಾತೊರೆಯುತ್ತಾರೆ. ತಕ್ಷಣ ಯಶಸ್ಸು ಸಿಗಬೇಕೆಂದು ಬಯಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಕನ್ನಡ ವಿಷಯದಲ್ಲಿ ಶೇ.85ಕ್ಕಿಂತ ಹೆಚ್ಚಿನ ಅಂಕ ಪಡೆದ ಭಾವಸಾರ ಸಮಾಜದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಭಾವಸಾರ ಕ್ಷತ್ರಿಯ ಮಹಾಜನ ಸಮಾಜದ ಅಧ್ಯಕ್ಷ ಟಿ.ವಿ.ಗಜೇಂದ್ರನಾಥ್ ಮಾಳೋದೆ, ಶ್ರೀ ರಾಮಸೇವಾ ಭಾವಸಾರ ಕ್ಷತ್ರಿಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಸಂತೋಷ್ ಸಾಕ್ರೆ, ಉಪಾಧ್ಯಕ್ಷ ಮಂಜುನಾಥ್ ಬೇದ್ರೆ, ಸುಬ್ಬರಾವ್ ಗುಜ್ಜರ್, ಭಾವಸಾರ ಕ್ಷತ್ರಿಯ ಯುವಕ ಸಂಘದ ಅಧ್ಯಕ್ಷ ಸಚಿನ್ ಬೇದ್ರೆ ಇತರರಿದ್ದರು.