

ಹನಗೋಡು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಹುಣಸೂರು ವನ್ಯಜೀವಿ ವಲಯದ ಅರಣ್ಯ ಇಲಾಖೆ ಸಿಬ್ಬಂದಿ ಗಣೇಶ ಹಾಗೂ ಶ್ರೀರಂಗ ಸಾಕಾನೆಗಳ ಸಹಾಯದಿಂದ ಹುಲಿ ಕೂಂಬಿಂಗ್ ಕಾರ್ಯಾಚರಣೆಯನ್ನು ಶೆಟ್ಟಹಳ್ಳಿ-ನೇಗತ್ತೂರು ಅರಣ್ಯ ಪ್ರದೇಶದಲ್ಲಿ ಗುರುವಾರ ನಡೆಸಿದರು.
ನೇಗತ್ತೂರು ಗ್ರಾಮದ ಲಕ್ಷ್ಮಮ್ಮ ಚಂದ್ರೇಗೌಡ ಎಂಬುವವರಿಗೆ ಸೇರಿದ ಎರಡು ಜಾನುವಾರುಗಳ ಮೇಲೆ ಮಂಗಳವಾರ ಹಾಡಹಗಲೇ ಹುಲಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ವ್ಯಾಘ್ರನ ಸೆರೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಪತ್ತೆಗೆ ಅರಣ್ಯ ಪ್ರದೇಶದ ಹತ್ತು ಕಡೆ ಸಿಸಿ ಕ್ಯಾಮರಾ ಅಳವಡಿಸಿದ್ದು, ಅದರಲ್ಲಿ ಹುಲಿಯ ಚಲನವಲನ ಸೆರೆಯಾಗಿದ್ದು ಹುಲಿ ಇರುವಿಕೆ ಖಚಿತವಾಗಿದೆ. ಬುಧವಾರ ಹುಲಿ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದು, ಗುರುವಾರ ಸಾಕಾನೆಗಳಾದ ಗಣೇಶ ಹಾಗೂ ಶ್ರೀರಂಗ ಸಾಕಾನೆಗಳಿಂದ ಕೂಂಬಿಂಗ್ ನಡೆಸಲಾಗಿದೆ. ಆದರೆ ಹುಲಿ ಸುಳಿವು ಸಿಕ್ಕಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಹುಣಸೂರು ವನ್ಯಜೀವಿ ಉಪವಿಭಾಗದ ವಲಯ ಅರಣ್ಯಾಧಿಕಾರಿ ಸುಬ್ರಮಣ್ಯ, ಡಿಆರ್‌ಎಫ್‌ಒಗಳಾದ ಸಿದ್ದರಾಜು, ವೀರಭದ್ರಯ್ಯ, ವಿಶೇಷ ಹುಲಿ ಸಂರಕ್ಷಣಾ ದಳ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.