

ಬೆಂಗಳೂರು: ಬಿಜೆಪಿ ಕೇಂದ್ರ ನಾಯಕರು ತಕ್ಷಣವೇ ಮಧ್ಯಪ್ರವೇಶ ಮಾಡಿ, ವಕ್ಪ್ ಅನ್ಯಾಯದ ವಿರುದ್ದ ಪಕ್ಷದ ಭಿನ್ನಮತೀಯರು ನಡೆಸಲು ಉದ್ದೇಶಿಸಿರುವ ಜನ ಜಾಗೃತಿ ಅಭಿಯಾನಕ್ಕೆ ಕಡಿವಾಣ ಹಾಕಬೇಕು ಎಂದು ಪಕ್ಷದ ನಿಷ್ಟಾವಂತ ಬಣ ಒತ್ತಡ ಹೇರಲು ಮುಂದಾಗಿದೆ.
ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಸದಾಶಿವನಗರದ ನಿವಾಸದಲ್ಲಿ 12ಕ್ಕೂ ಬಿಜೆಪಿ ಮಾಜಿ ಶಾಸಕರು ಬುಧವಾರ ಸಭೆ ಸೇರಿ ಇತ್ತೀಚಿನ ಬೆಳವಣಿಗೆ ಬಗ್ಗೆ
ಚರ್ಚಿಸಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ನೇತೃತ್ವದಲ್ಲಿ ನಡೆಸಲು ಮುಂದಾಗಿರುವ ಜನ ಜಾಗೃತಿ ಅಭಿಯಾನಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಸಾರಥ್ಯದಲ್ಲಿ ನಡೆಸಲು ಉದ್ದೇಶಿಸಿರುವ ನಮ್ಮ ಹಕ್ಕು ,ನಮ್ಮ ಹೋರಾಟದಲ್ಲಿ ಭಾಗಿಯಾಗಬೇಕು. ಪ್ರತ್ಯೇಕ ಅಭಿಯಾನ ನಡೆಸದಂತೆ ಸೂಚಿಸಬೇಕು ಎಂದು ವರಿಷ್ಠರಿಗೆ ಮನವಿ ಮಾಡಲು ಸಭೆಯಲ್ಲಿ ತೀರ್ಮಾನಿಸಿದ್ದಾರೆ.
ವಿಜಯೇಂದ್ರ ನೇತೃತ್ವದಲ್ಲಿ ನಾಲ್ಕು ಹಂತದ ಹೋರಾಟಕ್ಕೆ ತೀರ್ಮಾನವಾಗಿದ್ದು, ಅದೇ ಅಂತಿಮ. ಯಾವುದೇ ಕಾರಣಕ್ಕೂ ಯತ್ನಾಳ್ ಅವರ ಸಾರಥ್ಯಕ್ಕೆ ಅವಕಾಶ ನೀಡಬಾರದು ಎಂದು ಅತ್ತ ವರಿಷ್ಠರಿಗೆ ಕೋರಿಕೆ, ಇತ್ತ ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡಬೇಕು ಎಂದು ತೀರ್ಮಾನಿಸಿದ್ದಾರೆ.
ರಾಜ್ಯಧ್ಯಕ್ಷರು ಹೋರಾಟ, ಪ್ರತಿಭಟನೆಯ ಸಾರಥ್ಯವನ್ನು ವಹಿಸುವುದು ಸಹಜ. ವಿಜಯೇಂದ್ರರನ್ನು ಹೊರಗಿಟ್ಟು
ಯತ್ನಾಳ್, ಜಾರಕಿಹೊಳಿ, ಕುಮಾರ್ ಬಂಗರಾಪ್ಪ, ಲಿಂಬಾವಳಿ ಮತ್ತಿತರರು ನಡೆಸಲು ಉದ್ದೇಶಿಸಿರುವ ಅಭಿಯಾನವನ್ನು ತಡೆಯದಿದ್ದರೆ, ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಸಾದ್ಯವಾದರೆ, ಅತೀ ಶೀಘ್ರದಲ್ಲೇ ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ , ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ , ಸೇರಿದಂತೆ ಹಲವು ನಾಯಕರನ್ನು ಭೇಟಿ ಮಾಡಿ ವಸ್ತು ಸ್ಥಿತಿ ಮನವರಿಕೆ ಮಾಡಿಕೊಡಬೇಕು ಎಂದು ಹಲವಾರು ಪ್ರಮುಖರು ಒತ್ತಾಯ ಮಾಡಿದರೆಂದು ಗೊತ್ತಾಗಿದೆ.
ಇನ್ನು ಸಭೆಯಲ್ಲಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ನಾಯಕತ್ವದ ವಿರುದ್ಧ ಅಪಸ್ವರ ತೆಗೆಯುತ್ತಿರುವವರ ಬಗ್ಗೆಯೂ ಶಿಸ್ತು ಕ್ರಮ ಜರುಗಿಸಬೇಕು ಎಂಬ ನಿರ್ಣಯ ಮಾಡಲಾಗಿದೆ.
ಯಡಿಯೂರಪ್ಪ ಪಕ್ಷ ಕಟ್ಟುವಾಗ ಕೆಲವರು ಇನ್ನು ರಾಜಕೀಯಕ್ಕೆ ಬಂದಿರಲಿಲ್ಲ. ರಾಜ್ಯಾದ್ಯಂತ ಸೈಕಲ್ ತುಳಿದು
ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದವರು ಯಡಿಯೂರಪ್ಪ. ಅಂತಹವರ ಬಗ್ಗೆ ಲಘುವಾಗಿ ಮಾತನಾಡುವವರ ಬಾಯಿಗೆ ಬೀಗ ಹಾಕಬೇಕು.
ವಿಜಯೇಂದ್ರ ಅಧ್ಯಕ್ಷರಾದ ಸಂಘಟನೆ ಬಲಿಷ್ಟವಾಗುತ್ತಿದ್ದು, ಪಕ್ಷಕ್ಕೆ ಹೊಸ ಚೈತನ್ಯ ಬಂದಿದೆ. ವಾಲ್ಮೀಕಿ, ಮುಡಾ ಹಗರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡುಯ್ದವರೇ ವಿಜಯೇಂದ್ರ. ಈಗ ಅವರ ಬಗ್ಗೆಯೇ ಹಗುರವಾಗಿ ಕೆಲವರು ಮಾತನಾಡುತ್ತಾರೆ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು.
ಇದೇ 29 ರಂದು ಕೋಲಾರ ಜಿಲ್ಲೆ ಶ್ರೀನಿವಾಸಪೂರ ತಾಲ್ಲೂಕಿನಲ್ಲಿರುವ ಕುರುಡುಮಲೆಯಲ್ಲಿರುವ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿಂದಲೇ ರಾಜ್ಯ ಪ್ರವಾಸ ಆರಂಭಿಸಲು, ಅಲ್ಲಿಂದ ಡಿಸೆಂಬರ್ 1 ರಂದು ಮೈಸೂರಿನ ಚಾಮುಂಡಿ ಬೆಟ್ಟ ನಂತರ ಗೋಕಾರ್ಣಕ್ಕೆcಭೇಟಿ ನೀಡಲು ಸಭೆ ನಿರ್ಧರಿಸಿದೆ.
ಮಧ್ಯ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಭೇಟಿ ನೀಡಿ ಸರ್ಕಾರದ ಜನ ವಿರೋಧಿ ನೀತಿಯ ವಿರುದ್ಧ ಹೋರಾಟದ ಬಗ್ಗೆಯೂ ಚರ್ಚೆ ನಡೆದಿದೆ. ವಿಜಯೇಂದ್ರ ಅವರು, ವಕ್ಪ್ ವಿರುದ್ಧ ಹೋರಾಟ ನಡೆಸಲು ತಂಡ ರಚನೆ ಮಾಡುತ್ತಾರೆ ಎಂಬ ಸುದ್ದಿಯನ್ನು ಗ್ರಹಿಸಿದವರು, ಪರ್ಯಾಯವಾಗಿ ಅಭಿಯಾನ ನಡೆಸಲು ಮುಂದಾಗಿದ್ದಾರೆ. ವಾಸ್ತವವಾಗಿ ಇದನ್ನು ಹೈಜಾಕ್ ಮಾಡಿದವರೇ ಯತ್ನಾಳ್ ಮತ್ತು ಅವರ ತಂಡ ಎಂದು ಕಿಡಿಕಾರಿದ್ದಾರೆ.
ಸಭೆಯಲ್ಲಿ ಮಾಜಿ ಸಚಿವ ಬಿ.ಸಿ.ಪಾಟೀಲ್ ಶಾಸಕರಾದ ರೂಪಾಲಿ ನಾಯಕ, ಸುನೀಲ್ ನಾಯ್ಕ್ ಸುನೀಲ್ ಹೆಗಡೆ, ವೈ ಸಂಪಂಗಿ, ಎಸ್ ಕೆ ಬೆಳ್ಳುಬ್ಬಿ , ಮಾಡಾಳ್ ವಿರೂಪಾಕ್ಷಪ್ಪ, ವಿರೂಪಾಕ್ಷಪ್ಪ, ವೆಂಕಟ ಮುನಿಯಪ್ಪ , ನಾಗೇಂದ್ರ, ನಿರಂಜನ್ ಕುಮಾರ್, ಸೇರಿ 15ಕ್ಕೂ ಹೆಚ್ಚು ಮುಖಂಡರು ಹಾಜರಿದ್ದರು.