ಶಿಶುಗಳಿಗೆ ಪಾಲಿಶ್ ಆಘಾತ; ಅಧ್ಯಯನ ವರದಿಯಿಂದ ಬಹಿರಂಗ

Polish Rice
Published on

ಬೆಂಗಳೂರು: ಗರ್ಭಿಣಿ ಮತ್ತು ಬಾಣಂತಿಯರು ಪಾಲಿಶ್ ಮಾಡಿದ ಅಕ್ಕಿ ಸೇವನೆ ಮಾಡುತ್ತಿರುವುದು ನವಜಾತ ಶಿಶುಗಳ ಹೃದಯ ವೈಫಲ್ಯಕ್ಕೆ ಕಾರಣವಾಗುತ್ತಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆ ನಡೆಸಿರುವ ಅಧ್ಯಯನ ವರದಿಯಲ್ಲಿ ಬಹಿರಂಗವಾಗಿದೆ. ದಕ್ಷಿಣ ಮತ್ತು ಈಶಾನ್ಯ ಭಾರತದಲ್ಲಿ ಪಾಲಿಶ್ ಅಕ್ಕಿ ಪ್ರಧಾನ ಆಹಾರವಾಗಿದ್ದು, ಇದರ ಸೇವನೆಯಿಂದ ಎದೆ ಹಾಲಿನಲ್ಲಿ ಪೌಷ್ಟಿಕಾಂಶ ಕಡಿಮೆಯಾಗುತ್ತಿದೆ. ನವಜಾತ ಶಿಶುಗಳಿಗೆ ಅಗತ್ಯ ಪೌಷ್ಟಿಕಾಂಶ ದೊರೆಯದೆ ಹೃದಯ ವೈಫಲ್ಯ ಉಂಟಾಗುತ್ತಿದೆ ಎಂದು ವರದಿ ತಿಳಿಸಿದೆ.

ಸಂಸ್ಥೆಯ ಮಕ್ಕಳ ಹೃದ್ರೋಗ ವಿಭಾಗದ ವೈದ್ಯೆ ಡಾ. ಎಂ.ಕೆ. ಉಷಾ ಮತ್ತು ಡಾ. ಜಯರಂಗನಾಥ್ ನೇತೃತ್ವದ ತಂಡ ಆರು ವರ್ಷ ನಡೆಸಿದ ಅಧ್ಯಯನದಿಂದ ಈ ಅಂಶ ತಿಳಿದುಬಂದಿದೆ. ಅತಿ ವೇಗವಾಗಿ ಉಸಿರಾಡುವ, ವಾಂತಿ ಮತ್ತು ಸ್ತನ್ಯಪಾನ ಮಾಡಲು ಅಸಮರ್ಥತೆ ಹೊಂದಿದ್ದ 6 ತಿಂಗಳಿಗಿಂತ ಕಡಿಮೆ ವಯಸ್ಸಿನ 250 ಶಿಶುಗಳ ಮೇಲೆ ನಿಗಾ ವಹಿಸಲಾಗಿತ್ತು. ಈ ಪೈಕಿ ಅನೇಕ ಶಿಶುಗಳು ತುರ್ತು ನಿಗಾ ಘಟಕದಲ್ಲಿದ್ದರೆ, ಕೆಲವು ಕೃತಕ ಉಸಿರಾಟದ ಬೆಂಬಲ ಪಡೆದುಕೊಂಡಿದ್ದವು. ಅಧ್ಯಯನ ಸಂದರ್ಭದಲ್ಲಿ ಈ ಶಿಶುಗಳ ಹೃದಯದ ಬಲಾಭಾಗದಲ್ಲಿ ಮತ್ತು ಶ್ವಾಸಕೋಶದ ರಕ್ತನಾಳಗಳಲ್ಲಿ ತೀವ್ರತರ ಒತ್ತಡ ಇರುವುದನ್ನು ಪತ್ತೆ ಹಚ್ಚಲಾಗಿದೆ.

ವಿಟಮಿನ್ ಬಿ1 ಕೊರತೆ: ಮಾರಣಾಂತಿಕ ಸ್ಥಿತಿಯಲ್ಲಿದ್ದ ಶಿಶುಗಳ ಕುರಿತು ಅಧ್ಯಯನ ನಡೆಸಿದಾಗ ವಿಟಮಿನ್ ‘ಥಯಾಮಿನ್’ ಅಥವಾ ‘ವಿಟಮಿನ್ ಬಿ1’ ಕೊರತೆ ಯಿಂದ ಹೃದಯ ವೈಫಲ್ಯ ಆಗುತ್ತಿರುವುದು ತಿಳಿದುಬಂದಿದೆ. ಈ ಮಕ್ಕಳಿಗೆ ವಿಟಮಿನ್ ಬಿ1 ಔಷಧ ನೀಡಿದ್ದರಿಂದ 250ರಲ್ಲಿ 230 ಶಿಶುಗಳು ಸಂಪೂರ್ಣ ಗುಣ ಹೊಂದಿದ್ದು, 5-6 ಶಿಶುಗಳು ಸಾವನ್ನಪ್ಪಿದ್ದರೆ ಉಳಿದವರು ಇನ್ನೂ ಚಿಕಿತ್ಸೆ ಪಡೆಯುತ್ತಿವೆ. ಇದನ್ನೂ ಓದಿ: ನಮ್ ಲೈಫೇ ಬರ್ನ್ ಆಗ್ಹೋಯ್ತು ಎಂದು ಅಲವತ್ತುಕೊಂಡ ರಾಗಿಣಿ: ವಿಡಿಯೋ ವೈರಲ್ ಅಕ್ಕಿ ಬಳಕೆಯಲ್ಲಿರಲಿ ಎಚ್ಚರ: ಬಣ್ಣ, ವಿನ್ಯಾಸದಿಂದ ಆಕರ್ಷಕವಾಗಿ ಕಾಣುವ ಪಾಲಿಶ್ ಅಕ್ಕಿ ಸೇವಿನೆ ಆಹ್ಲಾದಕರವಾಗಿರುತ್ತದೆ. ಆದರೆ ಆರೋಗ್ಯಕ್ಕೆ ಅಷ್ಟೇ ಮಾರಕ. ಅಕ್ಕಿಗೆ ಹೊಳಪು ಬರುವಂತೆ ಮಾಡಲು ಪಾಲಿಶ್ ಮಾಡಲಾಗುತ್ತದೆ. ಇದರಿಂದ ಅಕ್ಕಿಯ ಹೊರಪದರದಲ್ಲಿ ಸಮೃದ್ಧವಾಗಿರುವ ವಿಟಮಿನ್ ಬಿ1 ಹಾಗೂ ಪೌಷ್ಟಿಕಾಂಶ ನಾಶವಾಗುತ್ತದೆ. ಅಂತಹ ಅಕ್ಕಿ ಸೇವನೆ ಶಿಶುಗಳ ಜೀವಕ್ಕೂ ಕಂಟಕವಾಗಿ ಪರಿಣಮಿಸಲಿದೆ ಎನ್ನುತ್ತಾರೆ ತಜ್ಞರು.

ಬದಲಾಗಲಿ ಬಾಣಂತಿ ಪಥ್ಯ

ದಕ್ಷಿಣ ಭಾರತದಲ್ಲಿ ಆಹಾರ ಸಂಪ್ರದಾಯದ ಒಂದು ಭಾಗವಾಗಿದ್ದು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣದ ಕೆಲ ಭಾಗಗಳಲ್ಲಿ ಇಂದಿಗೂ ‘ಬಾಣಂತಿ ಪಥ್ಯ’ ಆಚರಣೆಯಲ್ಲಿದೆ. ಪಥ್ಯ ಎಂದರೆ ಹೆರಿಗೆಯಾದ 2-3 ತಿಂಗಳವರೆಗೆ ತಾಯಂದಿರಿಗೆ ಮೂರು ಹೊತ್ತು ಅನ್ನ ಮತ್ತು ತಿಳಿಸಾರು ಮಾತ್ರವೇ ನೀಡಲಾಗುತ್ತದೆ. ಇದರಿಂದ ತಾಯಿಗೆ ಪೌಷ್ಟಿಕ ಆಹಾರ ದೊರೆಯದೆ ಕೇವಲ ಎದೆ ಹಾಲು ಅವಲಂಬಿಸುವ ಶಿಶುಗಳಿಗೂ ಮಾರಕವಾಗಲಿದೆ. ಹೀಗಾಗಿ ಬಾಣಂತಿ ಪಥ್ಯ ಬದಲಾಗಬೇಕು. ಬಾಣಂತಿಯರಿಗೆ ಕೇವಲ ಅನ್ನ ನೀಡದೆ, ಬೇಳೆ ಕಾಳುಗಳು, ದ್ವಿದಳ ಧಾನ್ಯಗಳು, ಹಣ್ಣು ತರಕಾರಿಗಳು, ಹಾಲು ಸೇರಿ ಪೌಷ್ಟಿಕಾಂಶ ಹೊಂದಿರುವ ಆಹಾರವನ್ನು ಯಥೇಚ್ಛವಾಗಿ ನೀಡುವುದರಿಂದ ಎದೆ ಹಾಲಿನ ಮೂಲಕ ಶಿಶುವಿಗೂ ಅಗತ್ಯ ಪೌಷ್ಟಿಕಾಂಶಗಳು ದೊರೆಯುತ್ತದೆ. ಹೀಗಾಗಿ ಗರ್ಭಿಣಿ ಮತ್ತು ಬಾಣಂತಿಯರು ಆಹಾರದ ಬಗ್ಗೆ ಎಚ್ಚರ ವಹಿಸಬೇಕು ಎನ್ನುತ್ತಾರೆ ಮಕ್ಕಳ ಹೃದ್ರೋಗ ತಜ್ಞೆ ಡಾ. ಉಷಾ.

ತಾಯಂದಿರು ನಯವಾದ ಅಕ್ಕಿ ಬಳಸದೆ, ಕೆಂಪಕ್ಕಿ, ಕುಸುಬಲಕ್ಕಿ, ರಾಗಿ, ಹಾಲು ಸೇರಿ ಹೇರಳವಾದ ಪೌಷ್ಟಿಕಾಂಶ ಹೊಂದಿರುವ ಆಹಾರ ಸೇವಿಸುವ ಮೂಲಕ ಶಿಶುಗಳಿಗೂ ಪೌಷ್ಟಿಕವಾದ ಹಾಲು ನೀಡಲು ಸಾಧ್ಯ. ಇದರಿಂದ ನವಜಾತ ಶಿಶುಗಳ ಮರಣ ಪ್ರಮಾಣ ತಗ್ಗಿಸಬಹುದಾಗಿದೆ. | ಡಾ. ಸಿ.ಎನ್. ಮಂಜುನಾಥ್, ನಿರ್ದೇಶಕ, ಜಯದೇವ ಹೃದ್ರೋಗ ಸಂಸ್ಥೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net