VIDEO | ಕೈಗೆ ಬಂತು ಹೊಸದಾಗಿ ನಿರ್ಮಿಸಿದ ರಸ್ತೆ; ಗುಣಮಟ್ಟ ಪ್ರಶ್ನಿಸಿದ ಸಾರ್ವಜನಿಕರು

ವಿಜಯವಾಣಿ - 2024-01-30T083334.234
Published on

ಉತ್ತರಪ್ರದೇಶದ: ಹೊಸದಾಗಿ ಡಾಂಬರ್​ನಿಂದ ನಿರ್ಮಿಸಲಾದ ಮುಖ್ಯ ರಸ್ತೆಯನ್ನು ನೋಡಿ ಸಾರ್ವಜನಿಕರು ಖಷಿ ಪಡುತ್ತಾರೆ ಎಂದು ಅಧಿಕಾರಿಗಳು ಭಾವಿಸಿದ್ದರು. ಆದ್ರೆ, ಹೊಸ ರಸ್ತೆಯ ಗುಣಮಟ್ಟವನ್ನು ಪರಿಶೀಲಿಸಿದ ನಗರ ನಿವಾಸಿಗಳು, ಅದನ್ನು ವಿಡಿಯೋ ಮಾಡುವ ಮೂಲಕ ಪ್ರಶ್ನಿಸಿ, ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್​​ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇತ್ತೀಚೆಗೆ ನಿರ್ಮಿಸಿದ ರಸ್ತೆಯ ಡಾಂಬರ್​ ಕೈಗೆ ಬರುತ್ತಿರುವುದನ್ನು ವಿಡಿಯೋ ಮಾಡಿದ ಸ್ಥಳೀಯರೊಬ್ಬರು, ನೂತನ ರಸ್ತೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದ್ರೆ, ಇದರ ಕಳಪೆ ಗುಣಮಟ್ಟ ಹೇಗಿದೆ? ಎಷ್ಟರ ಮಟ್ಟಿಗಿದೆ ಎಂಬುದನ್ನು ಒಮ್ಮೆ ಪರಿಶೀಲಿಸಿ ಎಂದು ಉತ್ತರಪ್ರದೇಶ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.

ಉನ್ನಾವೋದ ಬೇಥಾರ್‌ನಿಂದ ಸೈದ್‌ಪುರ ಮಾರ್ಗದಲ್ಲಿ ನಿರ್ಮಿಸಲಾದ ರಸ್ತೆಯ ಗುಣಮಟ್ಟದ ಬಗ್ಗೆ ಪ್ರಶ್ನೆಗಳು ಮುನ್ನೆಲೆಗೆ ಬಂದಿದ್ದು, 39 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ರಸ್ತೆಯು ಉನ್ನಾವೋ ಜಿಲ್ಲೆಯ ಭಗವಂತನಗರ ವಿಧಾನಸಭೆಯಲ್ಲಿ ಸುಮಾರು ಎರಡೂವರೆ ಕಿಲೋಮೀಟರ್‌ಗಳಷ್ಟು ವ್ಯಾಪಿಸಿದೆ. ಈ ವಿಡಿಯೋವನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ತಮ್ಮ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ವಿಚಾರದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೈವಾಡವನ್ನು ಪ್ರಶ್ನಿಸಿದ ಅವರು, "ಉನ್ನಾವೋದಲ್ಲಿ ಬಿಜೆಪಿ ಭ್ರಷ್ಟಾಚಾರದ ಪದರಗಳನ್ನು ಅನಾವರಣಗೊಳಿಸಲಾಗುತ್ತಿದೆ. ಇದನ್ನು ತನಿಖೆ ಮಾಡಲಾಗುತ್ತದೆಯೇ ಅಥವಾ ಬಿಜೆಪಿ ಸರ್ಕಾರವು ಒಳಸಂಚು ಮೂಲಕ ವಿಷಯವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತದೆಯೇ?" ಎಂದು ವ್ಯಂಗ್ಯವಾಡಿದ್ದಾರೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net