ನಗರಸಭೆ ನೂತನ ಕಚೇರಿ ನಿರ್ಮಾಣ

bdvt (2)
ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಬಜೆಟ್ ಮಂಡನೆ ಸಭೆಯಲ್ಲಿ ಪ್ರಭಾರ ಅಧ್ಯಕ್ಷ ಎಂ.ಮಣಿ, ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ಸ್ಥಾಯಿ ಸಮಿತಿ ಅಧ್ಯಕ್ಷ ರಿಯಾಜ್ ಅಹಮದ್ ಇದ್ದರು.
Published on

ಭದ್ರಾವತಿ: ನಗರದ ಸಂತೆ ಮೈದಾನ ಜಾಗದಲ್ಲಿ ನೂತನ ನಗರಸಭೆ ಕಚೇರಿ, ಬಸವೇಶ್ವರ ವೃತ್ತದಲ್ಲಿ ನೂತನ ವಾಣಿಜ್ಯ ಸಂಕೀರ್ಣ ನಿರ್ಮಾಣ, ಶುದ್ಧಿ ನೀರಿನ ಘಟಕ ಸ್ಥಾಪನೆ, ಬೀದಿ ಬದಿ ವ್ಯಾಪಾರಿಗಳಿಗೆ ಫುಡ್‌ಕೋರ್ಟ್ ನಿರ್ಮಾಣ ಮತ್ತಿತರ ಹೊಸ ಯೋಜನೆಗಳನ್ನು ಪ್ರಸಕ್ತ ವರ್ಷದ ನಗರಸಭೆ ಬಜೆಟ್‌ನಲ್ಲಿ ಘೋಷಿಸುವ ಜತೆಗೆ 1.31 ಕೋಟಿ ರೂ. ಉಳಿತಾಯ ಆಯವ್ಯಯವನ್ನು ನಗರಸಭೆ ಪ್ರಭಾರ ಅಧ್ಯಕ್ಷ ಎಂ.ಮಣಿ ಬುಧವಾರ ಮಂಡಿಸಿದರು.

5.29 ಕೋಟಿ ರೂ. ವೆಚ್ಚದಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ಮೆಟೀರಿಯಲ್ ರಿಕವರಿ ಫೆಸಿಲಿಟಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. 15ನೇ ಹಣಕಾಸು ಯೋಜನೆಯಡಿ ಪೈಪ್‌ಲೈನ್, ಮಳೆ ನೀರು ಸಂಗ್ರಹ, ಚರಂಡಿ, ರಸ್ತೆ ಅಭಿವೃದ್ಧಿ ಮತ್ತಿತರ ಮೂಲ ಸೌಕರ್ಯ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

15 ಕೋಟಿ ರೂ. ಎಸ್‌ಎಫ್‌ಸಿ ವಿಶೇಷ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಸಾರ್ವಜನಿಕ ಕುಂದು ಕೊರತೆಗಳ ಇತ್ಯರ್ಥಕ್ಕೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ನೆರೆಹೊರೆ ಗುಂಪು, ಪ್ರದೇಶ ಸಭಾ ಮತ್ತು ವಾರ್ಡ್ ಸಮಿತಿಗಳನ್ನು ರಚಿಸಲಾಗುವುದು. ಅಮೃತ್ ಯೋಜನೆಯಡಿ ಉಜ್ಜನೀಪುರ ಕೆರೆ ಹಾಗೂ ಉದ್ಯಾನಗಳ ಅಭಿವೃದ್ಧಿ, ನ್ಯೂಟೌನ್ ಭಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ, 35 ವಾರ್ಡ್‌ಗಳ ಸಾರ್ವಜನಿಕ ಸ್ಥಳಗಳಲ್ಲಿ ಕುಳಿತುಕೊಳ್ಳಲು ಬೆಂಚ್ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕ್ ಮೂಲಕ ಸಾಲ ಸೌಲಭ್ಯ, ನ್ಯೂಟೌನ್ ಭಾಗದಲ್ಲಿ ಆಸ್ತಿ ತೆರಿಗೆ, ನೀರಿನ ಶುಲ್ಕ ಮತ್ತಿತರ ಶುಲ್ಕಗಳ ಪಾವತಿಗೆ ಅನುಕೂಲವಾಗುವಂತೆ ಎನ್‌ಟಿಬಿ ಕಚೇರಿಯಲ್ಲಿ ಕೌಂಟರ್ ಆರಂಭಿಸುವ ಉದ್ದೇಶವಿದೆ ಎಂದರು.

ಕಳೆದ ಬಜೆಟ್‌ನ ಘೋಷಣೆಯಂತೆ ಪೌರ ಕಾರ್ಮಿಕರ ಆರೋಗ್ಯ ಸುರಕ್ಷೆಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಪೌರ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಹಾಗೂ ವೈದ್ಯಕೀಯ ಸೌಲಭ್ಯಕ್ಕಾಗಿ ಸಹಾಯಧನ ನೀಡಲಾಗುತ್ತಿದೆ. ಅಂಬೇಡ್ಕರ್ ವೃತ್ತದಲ್ಲಿ 12 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ ಮಾಡಲಾಗಿದೆ. ಖಾಸಗಿ ಬಸ್ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಹೆಸರು ನಾಮಕರಣ, ಜೈಭೀಮ್ ನಗರದಲ್ಲಿ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಜಿ ಪ್ಲಸ್ ತ್ರೀ ಮಾದರಿ ಗುಂಪು ಮನೆಗಳ ಹಂಚಿಕೆ ಮಾಡಲಾಗಿದೆ. 44 ಲಕ್ಷ ರೂ. ವೆಚ್ಚದಲ್ಲಿ ತರೀಕೆರೆ ರಸ್ತೆಯ ಕನ್ಸರ್ವೆನ್ಸಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಶೀಘ್ರ ಉದ್ಘಾಟನೆ ನೆರವೇರಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಮಣಿ ಹೇಳಿದರು.

ಶೌಚಗೃಹ ನಿರ್ಮಾಣಕ್ಕೆ ಆದ್ಯತೆ ಕೊಡಿ: ನಗರಸಭೆ ವ್ಯಾಪ್ತಿಯಲ್ಲಿ 32 ಕೊಳೆಗೇರಿಗಳಿವೆ. ಬಹುತೇಕ ಕಡೆ ಶೌಚಗೃಹಗಳಿಲ್ಲದೆ ಜನರಿಗೆ ಕಿರಿಕಿರಿಯಾಗುತ್ತಿದೆ. ನಗರವನ್ನು ಸ್ವಚ್ಛ ಮತ್ತು ಸುಂದವಾಗಿ ಇಡಬೇಕಾದರೆ ಶೌಚಗೃಹಕ್ಕೆ ಹೆಚ್ಚು ಆದ್ಯತೆ ನೀಡಬೇಕು ಕೊಡಬೇಕು. ಹಾಗಾಗಿ ಶೌಚಗೃಹ ನಿರ್ಮಾಣಕ್ಕೆ ಹೆಚ್ಚಿನ ಆಧ್ಯತೆ ಕೊಡಬೇಕು ಎಂದು ಸದಸ್ಯ ಬಿ.ಕೆ.ಮೋಹನ್ ಒತ್ತಾಯಿಸಿದರು. ಬಜೆಟ್ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ಶಾಸಕರು 100 ಕೋಟಿ ರೂ. ಅನುದಾನ ತಂದಿದ್ದು, ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ಸಿಕ್ಕಿದೆ. ನಗರಸಭೆಯ ಹಣ ನಂಬಿದ್ದರೆ ಅಭಿವೃದ್ಧಿ ಸಾಧ್ಯವಾಗುತ್ತಿರಲಿಲ್ಲ ಎಂದರು.

ಕಂದಾಯ ಸಂಗ್ರಹ ಮಾಡಿ: ನಗರದಲ್ಲಿರುವ ಕಲ್ಯಾಣ ಮಂಟಪಗಳು, ರೈಸ್‌ಮಿಲ್‌ಗಳು, ಶಾಲೆಗಳು, ಕಾರ್ಖಾನೆಗಳು ನಗರಸಭೆಗೆ ಕಂದಾಯ ಕಟ್ಟುತ್ತಿಲ್ಲ. ಇದರಿಂದ ನಗರಸಭೆಗೆ ಸಾಕಷ್ಟು ನಷ್ಟ ಉಂಟಾಗಿದೆ. ಈ ಬಗ್ಗೆ ಕ್ರಮ ಜರುಗಿಸಿದರೆ ನಗರಸಭೆ ಆದಾಯ ಕ್ರೋಡೀಕರಣ ಮಾಡಬಹುದು ಎಂದು ಸುದೀಪ್ ಸಲಹೆ ನೀಡಿದರು. ಟಿಪ್ಪು ಮಾತನಾಡಿ, ವಿವಿಧ ಯೋಜನೆಗೆ ಬಂದ ಅನುದಾನವನ್ನು ನಗರಸಭೆ ಟೆಂಡರ್ ಕರೆದು ಬಳಕೆ ಮಾಡಿಕೊಳ್ಳದೆ ಹಾಗೆಯೇ ಉಳಿಸಿಕೊಂಡಿದೆ. ಅನುದಾನ ಬಳಕೆ ಮಾಡಿಕೊಳ್ಳದೆ ಹಾಗೆಯೇ ಇಟ್ಟಿರುವುದು ಸೂಕ್ತವಲ್ಲ. ಟೆಂಡರ್ ಕರೆದು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಪೌರಾಯುಕ್ತ ಪ್ರಕಾಶ್ ಎಂ ಚನ್ನಪ್ಪನವರ್, ಸ್ಥಾಯಿ ಸಮಿತಿ ಅಧ್ಯಕ್ಷ ರಿಯಾಜ್ ಅಹಮದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net