ಕ್ಷೇತ್ರದ ಎಲ್ಲ ಕಡೆ ಚೆಕ್ ಡ್ಯಾಂ ಸೇತುವೆ ನಿರ್ಮಾಣ

10blrp1
ಬೇಲೂರು ತಾಲೂಕಿನ ಗೊಟ್ರುವಳ್ಳಿ ಗ್ರಾಮದ ಸಮೀಪ ಚೆಕ್ ಡ್ಯಾಂ ಸೇತುವೆ ಕಾಮಗಾರಿಗೆ ಶಾಸಕ ಎಚ್.ಕೆ.ಸುರೇಶ್ ಭೂಮಿ ಪೂಜೆ ನೆರವೇರಿಸಿದರು. ಗಂಗೇಶ್, ಕುಮಾರ್ ನಾಯಕ, ಸುಂದರ್‌ರಾವ್ ಇದ್ದರು.
Published on

ಬೇಲೂರು: ಸಣ್ಣ ನೀರಾವರಿ ಇಲಾಖೆಯಿಂದ 1 ಕೋಟಿ ರೂ, ವೆಚ್ಚದಲ್ಲಿ ಗೊಟ್ರುವಳ್ಳಿ ಗ್ರಾಮದ ಸಮೀಪ ನಿರ್ಮಿಸುತ್ತಿರುವ ಚೆಕ್ ಡ್ಯಾಂ ಸೇತುವೆ ತಾಲೂಕಿನ ಚೀಕನಹಳ್ಳಿ ಹಾಗೂ ಗೆಂಡೇಹಳ್ಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆಯಾಗಲಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.

ತಾಲೂಕಿನ ಚಿಕ್ಕಮೇದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಟ್ರುವಳ್ಳಿ ಗ್ರಾಮದ ಸಮೀಪ ಚೆಕ್ ಡ್ಯಾಂ ಸೇತುವೆ ಕಾಮಗಾರಿಗೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಇಲ್ಲಿನ ಗ್ರಾಮಸ್ಥರು ಚೀಕನಹಳ್ಳಿ ಮತ್ತು ಗೆಂಡೇಹಳ್ಳಿ ಭಾಗಕ್ಕೆ ತೆರಳಲು ಬೈಪಾಸ್ ರಸ್ತೆ ಅಗತ್ಯದ ಬಗ್ಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಗೊಟ್ರುವಳ್ಳಿ ಸಮೀಪದ ಹಳ್ಳಕ್ಕೆ ಚಿಕ್ಕದಾಗಿದ್ದ ಸೇತುವೆ ತೆರವುಗೊಳಿಸಿ ಸಣ್ಣ ನೀರಾವರಿ ಇಲಾಖೆಯಿಂದ 1 ಕೋಟಿ ರೂ, ವೆಚ್ಚದಲ್ಲಿ ದೊಡ್ಡ ಸೇತುವೆ ನಿರ್ಮಿಸಲು ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ಅನುದಾನ ತಂದು ಕೆಲಸ ಮಾಡಿಸಲಾಗುತ್ತಿದೆ. ಅಲ್ಲದೆ ಇದೇ ಹಳ್ಳದ ನೀರನ್ನು ಶೇಖರಿಸಿ ಅಂತರ್ಜಲ ವೃದ್ದಿಗೆ ಪೂರಕವಾಗುವ ನಿಟ್ಟಿನಲ್ಲಿ ಚೆಕ್ ಡ್ಯಾಂ ನಿರ್ಮಿಸುವ ಕಾಮಗಾರಿಗೆ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಸೇತುವೆಯಿಂದ ಚೀಕನಹಳ್ಳಿ ಭಾಗದವರು ಗೆಂಡೇಹಳ್ಳಿ ಭಾಗಕ್ಕೆ ಮತ್ತು ಬೇಲೂರಿಗೆ ಹೊಗುವ ಬದಲು ಇದೇ ಸೇತುವೆ ಮೂಲಕ ಸುಲಭ ಮಾರ್ಗದಿಂದ ಸಂಚರಿಸಬಹುದಾಗಿದೆ. ಈಗಾಗಲೇ ಇದೇ ರೀತಿಯಲ್ಲಿ ಬೇಲೂರು ಕ್ಷೇತ್ರದ ಮುಂತಾದ ಕಡೆಗಳಲ್ಲಿ ಚೆಕ್ ಡ್ಯಾಂ ರೀತಿಯಲ್ಲಿ ಸೇತುವೆ ನಿರ್ಮಿಸಲಾಗುತ್ತಿದೆ ಎಂದರು.

ಮುಖಂಡರಾದ ಗಂಗೇಶ್, ಕುಮಾರ್ ನಾಯಕ, ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಸುಂದರ್‌ರಾವ್, ಚಿಕ್ಕಮೇದೂರು ಗ್ರಾಮ ಪಂಚಾಯಿತಿ ಪಿಡಿಒ ಸಂತೋಷ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net