

ಬೆಂಗಳೂರು: ರಾಜ್ಯದಲ್ಲಿ ತರಕಾರಿ ಮತ್ತಿತರ ತ್ಯಾಜ್ಯ ಬಳಸಿ ಜೈವಿಕ ಅನಿಲ (ಬಯೋ ಸಿಎನ್‌ಜಿ) ಉತ್ಪಾದಿಸುವ ಮೂರು ಘಟಕಗಳನ್ನು ಸ್ಥಾಪಿಸುವ ಯೋಜನೆ ರೂಪಿಸಲಾಗಿದೆ ಎಂದು ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಮಾಹಿತಿ ನೀಡಿದರು.
ಕೃಷಿ ಮಾರುಕಟ್ಟೆ ಇಲಾಖೆ ಕಚೇರಿಯಲ್ಲಿ ದೆಹಲಿಯ ಕೃಷಿ ಮಾರುಕಟ್ಟೆ ಇಲಾಖೆ ಮಂಡಳಿ (ಕೊಸ್ಯಾಂಬೋ) ವ್ಯವಸ್ಥಾಪಕ ನಿರ್ದೇಶಕ ಡಾ.ಜೆ.ಎಸ್.ಯಾದವ್ ಸೋಮವಾರ ಭೇಟಿಯಾಗಿ ಚರ್ಚಿಸಿದ ವೇಳೆ ಸಚಿವರು ಈ ವಿಷಯ ತಿಳಿಸಿದರು.
ರಾಜ್ಯದಲ್ಲಿ ಬೆಂಗಳೂರಿನ ದಾಸನಪುರ, ಮೈಸೂರು ಮತ್ತು ಕೋಲಾರಗಳಲ್ಲಿ ಈಗಾಗಲೇ ಬಯೋ ಸಿಎನ್‌ಜಿ ಪ್ಲಾಂಟ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಅತಿ ಹೆಚ್ಚು ಸಾವಯವ ತ್ಯಾಜ್ಯ ಉತ್ಪಾದನೆಯಾಗುವ ಈ ಸ್ಥಳಗಳು ಬಯೋ ಸಿಎನ್‌ಜಿ ಪ್ಲ್ಯಾಂಟ್‌ಗೆ ಸೂಕ್ತವೆಂಬ ಅಭಿಪ್ರಾಯ ವ್ಯಕ್ತವಾಯಿತು.
ತರಕಾರಿ ಮತ್ತು ಇತರ ತ್ಯಾಜ್ಯ ಬಳಕೆ ಮಾಡಿ ಬಯೋ ಸಿಎನ್‌ಜಿ ಪ್ಲಾಂಟ್‌ಗಳ ಸ್ಥಾಪನೆಗೆ ಕೇಂದ್ರ ಸರ್ಕಾರದ ಕಾರ್ಬನ್ ಕ್ರೆಡಿಟ್ಸ್ ಅನುದಾನ ಬಳಸಬಹುದಾಗಿದೆ ಎಂದು ಡಾ.ಜೆ.ಎಸ್.ಯಾದವ್ ತಿಳಿಸಿದರು.
ತರಕಾರಿ ಮತ್ತಿತರ ತ್ಯಾಜ್ಯ ಬಳಸಿ ಬಯೋ ಗ್ಯಾಸ್ ಉತ್ಪಾದನೆ ಮಾಡುವುದರಿಂದ ಪರಿಸರಕ್ಕೆ ವಿಷಕಾರಿ ಅನಿಲ ಸೇರ್ಪಡೆಯಾಗುವುದನ್ನು ತಡೆಗಟ್ಟಬಹುದು. ಘನ ತ್ಯಾಜ್ಯ ನಿರ್ವಹಣೆ ಕಾಯ್ದೆಗೆ ಕೇಂದ್ರ ಸರ್ಕಾರ ಅಕ್ಟೋಬರ್‌ನಲ್ಲಿ ತಿದ್ದುಪಡಿ ತರಲಿದೆ.
ಈ ಮೂಲಕ ಲಭ್ಯವಾಗುವ ನೆರವನ್ನು ಬಳಕೆ ಮಾಡಿಕೊಂಡು ಎಪಿಎಂಸಿಗಳಲ್ಲಿ ಬಯೋ ಗ್ಯಾಸ್ ಪ್ಲಾಂಟ್‌ಗಳನ್ನು ನಿರ್ಮಾಣ ಮಾಡುವುದು ಸೂಕ್ತ ಎಂದು ಡಾ. ಜೆ.ಎಸ್. ಯಾದವ್ ಸಲಹೆ ಮಾಡಿದರು.
ಪ್ರತಿದಿನ 50 ಟನ್ ಉತ್ಪಾದನೆ ಮಾಡಿದರೆ ಮಾತ್ರ ಈ ಯೋಜನೆ ಲಾಭದಾಯಕವಾಗಲಿದೆ. ಇದು ಲಾಭದಾಯಕ ಎಂದಾಗ ಮಾತ್ರ ಖಾಸಗಿಯವರೂ ಬಯೋ ಗ್ಯಾಸ್ ಪ್ಲಾಂಟ್ ನಿರ್ಮಿಸಲು ಮುಂದೆ ಬರುತ್ತಾರೆ ಎಂದರು.
ರಾಜ್ಯದ ಯಾವ ಯಾವ ಎಪಿಎಂಸಿಗಳಲ್ಲಿ ಪ್ರತಿದಿನ ಎಷ್ಟು ತ್ಯಾಜ್ಯ ಉತ್ಪಾದನೆಯಾಗುತ್ತದೆ. ಎಲ್ಲೆಲ್ಲಿ ಬಯೋಗ್ಯಾಸ್ ಪ್ಲಾಂಟ್ ನಿರ್ಮಿಸಿದರೆ ಲಾಭದಾಯಕ ಎಂಬುದನ್ನು ಗುರುತಿಸಿ ಯೋಜನೆ ರೂಪಿಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬರಲಾಯಿತು.
ಹಣ್ಣುಗಳ ಪ್ಯಾಕಿಂಗ್ ಮಾಡಲು ಹಾನಿಕಾರಕ ರಾಸಾಯನಿಕ ಬಳಕೆ, ಸೇಬು ಸೇರಿದಂತೆ ಇತರ ಹಲವು ಹಣ್ಣುಗಳ ಬ್ರಾಂಡ್‌ಗಳನ್ನು ಗುರುತಿಸಲು ಅವುಗಳ ಮೇಲೆ ಸ್ಟಿಕ್ಕರ್‌ಗಳನ್ನು ಹಚ್ಚುವುದು ಅಪಾಯಕಾರಿ. ಇಂತಹ ಹಣ್ಣುಗಳ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದ್ದು, ಈ ಬಗ್ಗೆ ವರ್ತಕರಲ್ಲಿ ಜಾಗೃತಿ ಮೂಡಿಸಬೇಕು ಎಂಬ ಬಗ್ಗೆ ಕೂಡ ಚರ್ಚೆ ನಡೆಯಿತು.
ಆಹಾರ ಸುರಕ್ಷತೆ ಕಾಯ್ದೆಯಲ್ಲಿ ಈ ಎಲ್ಲ ಅಂಶಗಳು ಬರುತ್ತವೆ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಅಂಶಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ. ಈ ನಿಯಮಗಳನ್ನು ಪಾಲನೆ ಮಾಡಲು ಜಾಗೃತಿ ಮೂಡಿಸುವ ಅವಶ್ಯಕತೆಯಿದೆ.
ಕಲ್ಲಂಗಡಿ, ಬೆಂಡೆಕಾಯಿ, ಕ್ಯಾರೆಟ್ ಸೇರಿದಂತೆ ಕೆಲವು ಹಣ್ಣು, ತರಕಾರಿಗಳಿಗೆ ಕೃತಕ ಬಣ್ಣ ಬಳಕೆ ಮಾಡಲಾಗುತ್ತಿದೆ. ಗರಿಷ್ಠ ಪ್ರಮಾಣದಲ್ಲಿ ಕೀಟನಾಶಕ ಬಳಸುವುದೂ ಕೂಡ ಅಪಾಯಕಾರಿಯಾಗಿದೆ ಎಂಬ ಕಳವಳ ವ್ಯಕ್ತವಾಯಿತು.
ತರಕಾರಿಗೆ ಕೃತಕ ಬಣ್ಣ ಬಳಕೆ ಮತ್ತು ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಕೀಟನಾಶಕ ಬಳಸುವ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಇಲ್ಲವಾದರೆ ಭವಿಷ್ಯದ ದಿನಗಳಲ್ಲಿ ಆರೋಗ್ಯದ ಮೇಲೆ ಗರಿಷ್ಠ ಪ್ರಮಾಣದಲ್ಲಿ ದುಷ್ಪರಿಣಾಮ ಬೀರಲಿದೆ ಎನ್ನುವ ಅಂಶಗಳ ಬಗ್ಗೆ ಕೂಡ ಚರ್ಚೆ ನಡೆಯಿತು.
ತೋಟಗಾರಿಕೆ, ಪುಷ್ಪೋದ್ಯಮ ಮತ್ತು ಹೈನುಗಾರಿಕೆ ಉದ್ಯಮದಲ್ಲಿ ಕರ್ನಾಟಕ ಮಂಚೂಣಿಯಲ್ಲಿದೆ ಎಂದು ಸಚಿವ ಶಿವಾನಂದ ಪಾಟೀಲ ಗಮನಸೆಳೆದರು. ಈ ಸಂದರ್ಭದಲ್ಲಿ ಕೃಷಿ ಮಾರುಕಟ್ಟೆ ಇಲಾಖೆ ನಿರ್ದೇಶಕ ಶಿವಾನಂದ ಕಾಪಸೆ, ಅಧೀಕ್ಷಕ ಇಂಜಿನಿಯರ್ ರಘುನಂದನ್, ಕರ್ನಾಟಕ ಕೃಷಿ ಮಾರಾಟ ಮಹಾ ಮಂಡಳದ ಮುಖ್ಯ ಪ್ರಧಾನ ವ್ಯವಸ್ಥಾಪಕ ಚಂದ್ರಕಾಂತ್ ಪಾಟೀಲ ಇದ್ದರು.