

ಕೋಲಾರ: ತಾಲೂಕಿನ ಖಾದ್ರಿಪುರ ಗ್ರಾಮದ ಸಮೀಪ ಕೋಲಾರ ನಗರ ಸಭೆಗೆ ಕ್ರಯ ಆಗಿರುವ ಒಟ್ಟು 6.11 ಎಕರೆ ಜಮೀನಿಗೆ ಸೋಮವಾರ ಬೇಲಿ ನಿರ್ಮಿಸಿ ಭದ್ರಪಡಿಸಲಾಯಿತು.
ನಗರಸಭೆ ಆಶ್ರಯ ಸಮಿತಿಯಿಂದ ನಿವೇಶನ, ವಸತಿ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ರ್ನಿಣಹಿಸಿ, ಖಾಸಗಿ ವ್ಯಕ್ತಿಗಳಿಂದ 2001-2002ರಲ್ಲೇ ಖಾದ್ರಿಪುರ ಸರ್ವೇ ನಂ.34/1ರ ಪೈಕಿ 2.15 ಎಕರೆ, 34/2 2.06 ಎಕರೆ ಹಾಗೂ 33/2ಎ ಪೈಕಿ 3.30 ಎಕರೆ ಜಮೀನು ಸೇರಿ ಒಟ್ಟು 6.11 ಎಕರೆ ಖರೀದಿಸಿ ನೋಂದಣಿ ಇಲಾಖೆ ಮೂಲಕ ಜಮೀನು ಮಾಲೀಕರಿಂದ ನಗರಸಭೆಯ ಪೌರಾಯುಕ್ತರ ಹೆಸರಿಗೆ ಕ್ರಯ ಮಾಡಿಸಿಕೊಳ್ಳಲಾಗಿತ್ತು. ಆದರೆ, ಆ ಜಾಗವನ್ನು ಖಾಸಗಿಯವರು ಒತ್ತುವರಿ ಮಾಡಿಕೊಳ್ಳಲು ಮುಂದಾಗಿದ್ದರು.
ಇದರ ಬೆನ್ನಲೇ ದಾಖಲೆಗಳನ್ನು ಕಲೆ ಹಾಕಿದ ನಗರಸಭೆ ಸದಸ್ಯರಾದ ಪ್ರವಿಣ್ಗೌಡ, ರಾಕೇಶ್ ಅವರು ಕ್ಷೇತ್ರದ ಶಾಸಕ ಕೊತ್ತೂರು ಜಿ.ಮಂಜುನಾಥ್, ಅಧ್ಯೆ ಲಕ್ಷಿ$್ಮದೇವಮ್ಮ, ಪೌರಾಯುಕ್ತ, ತಹಸೀಲ್ದಾರ್ ಅವರು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದು ನಗರಸಭೆ ಆಸ್ತಿಗಳ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದ್ದರು.
ಈ ಪ್ರಹಸನದ ಬಳಿಕ ನಗರಸಭೆಯ ಕಂದಾಯ ವಿಭಾಗದಿಂದ ಸರ್ವೇಯರ್ ಅವರಿಗೆ ಪತ್ರ ರವಾನಿಸಿ ಸರ್ವೇಗೆ ಮನವಿ ಮಾಡಲಾಗಿತ್ತು. ಎಡಿಎಲ್ಆರ್ ಹನುಮಂತರಾಯಪ್ಪ ಸಿಬ್ಬಂದಿಯೊಂದಿಗೆ ನಗರಸಭೆಗೆ ಕ್ರಯ ಆಗಿರುವ ಸರ್ವೇ ನಂಬರ್ಗಳ ಜಮೀನುಗಳನ್ನು ಸರ್ವೇ ಮಾಡಿ ಗಡಿ ಗುರುತಿಸಿಕೊಟ್ಟಿದ್ದರು. ಅಂದೇ ನಗರಸಭೆ ಅಧಿಕಾರಿಗಳು ಟ್ರಂಚ್ ನಿರ್ಮಾಣ ಮಾಡಿದ್ದರು.
ಈಗ ಸೋಮವಾರ ಬೆಳಗ್ಗೆಯಿಂದಲೇ ಅಧಿಕಾರಿಗಳು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರ ರಕ್ಷಣೆಯಲ್ಲಿ ಕಲ್ಲು ಕೂಚು ನೆಟ್ಟು ಬೇಲಿ ನಿರ್ಮಿಸಿದರು. ಇದಾದ ಕೂಡಲೇ ಬೋರ್ಡ್ ಅಳವಡಿಸಬೇಕು, ಆಗಾಗ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಿತಿಗತಿ ಪರಿಶೀಲಿಸಬೇಕು ಎಂದು ಅಧ್ಯೆ ಲಕ್ಷಿ$್ಮದೇವಮ್ಮ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ನಗರಸಭೆ ಪೌರಾಯುಕ್ತ ಎಸ್. ಪ್ರಸಾದ್ರೆಡ್ಡಿ, ಉಪಾಧ್ಯೆ ಸಂಗೀತಾ, ಸದಸ್ಯರಾದ ಪ್ರವಿಣ್ಗೌಡ, ಎಸ್.ಆರ್.ಮುರಳಿಗೌಡ, ರಾಕೇಶ್, ಗುಣಶೇಖರ್, ರಮೇಶ್, ಪಾವನ, ಇಂಜಿನಿಯರ್ ಗಂಗಾಧರ್ ಇತರರಿದ್ದರು.
* ಕೆಲವರಿಂದ ಆಕ್ಷೇಪಣೆ
ನಗರಸಭೆಗೆ ಕ್ರಯ ಆಗಿದ್ದ ಜಮೀನುಗಳನ್ನು ಸ್ಥಳಿಯ ಮುಖಂಡನೋರ್ವ ನಿವೇಶನಗಳನ್ನಾಗಿ ವಿಂಗಡಿಸಿ, ಇನ್ನು ಕೆಲ ಜಮೀನುಗಳನ್ನು ಗುಂಟೆ ಲೆಕ್ಕದಲ್ಲಿ ಬೇರೆಯವರಿಗೆ ಪರಭಾರೆ ಮಾಡಿದ್ದರು. ಒತ್ತುವರಿ ತೆರವು ಸಂದರ್ಭದಲ್ಲಿ ಕೆಲ ಖರೀದಿದಾರರು ಸ್ಥಳಕ್ಕೆ ಬಂದು ಆಕ್ಷೇಪ ವ್ಯಕ್ತಪಡಿಸಿದರು. ಆಗ ಪೌರಾಯುಕ್ತ ಎಸ್.ಪ್ರಸಾದ್ರೆಡ್ಡಿ ದಾಖಲೆ ಪರಿಶೀಲಿಸಿದರು. ಖರೀದಿದಾರರು ಹಾಗೂ ನಗರಸಭೆ ದಾಖಲೆಗಳಿಗೆ ತಾಳೆಯಾಗಲಿಲ್ಲ. ಇದು ನಗರಸಭೆಗೆ ಸೇರಿದ ಜಾಗ ಎಂದು ತಿಳಿಸಿ ತೆರವು ಮುಂದುವರಿಸಿದರು.
* ಎಲ್ಲ ಆಸ್ತಿಯು ಭದ್ರವಾಗಲಿ
ಹಿಂದಿನ ಅಧಿಕಾರಿಗಳು ಬದ್ಧತೆ ತೋರಿ ನಗರಭೆ ಆಸ್ತಿಗಳನ್ನು ರಕ್ಷಣೆ ಮಾಡಿದ್ದರೆ ಈ ಅವ್ಯವಸ್ಥೆಗೆ ಕಾರಣವಾಗುತ್ತಿರಲಿಲ್ಲ. ಸಿಬ್ಬಂದಿ ದಾಖಲೆ ನಿರ್ವಹಣೆ ಮಾಡದೆ ಇರುವುದು ನಕಲಿ ದಾಖಲೆ ಸೃಷ್ಟಿಗೆ ಎಡೆ ಮಾಡಿದೆ. ಒಟ್ಟಾರೆ ಆಸ್ತಿಗಳನ್ನು ಇದೇ ರೀತಿ ಭದ್ರಪಡಿಸಲು ಮುಂದಾಗಬೇಕು ಎಂದು ಸದಸ್ಯ ಪ್ರವಿಣ್ಗೌಡ ಒತ್ತಾಯಿಸಿದರು.
* ಆಸ್ತಿಗಳ ರಕ್ಷಣೆಗೆ ಒತ್ತು
ಖಾದ್ರಿಪುರ ಸಮೀಪದ ಕೆಲ ಸರ್ವೇ ನಂಬರ್ ಪೈಕಿ ಜಮೀನು ನಗರಸಭೆಗೆ ಕ್ರಯ ಆಗಿದ್ದು, ಇದನ್ನು ಸರ್ವೇ ಮಾಡಿಸಿ ಬೇಲಿ ನಿರ್ಮಿಸಿಕೊಳ್ಳಲಾಗಿದೆ. ಇದೇ ರೀತಿ ಬಸವನತ್ತ, ಸಂಗೋಡಹಳ್ಳಿ ಸಮೀಪದ ಜಾಗವನ್ನೂ ನಗರಸಭೆ ಸುಪರ್ದಿಗೆ ಪಡೆದುಕೊಳ್ಳಲಾಗುವುದು. ಇನ್ನು ಕೆಲ ಜಾಗಗಳ ಸಂಬಂಧ ಕೋರ್ಟ್ನಲ್ಲಿ ದಾವೆ ಇದ್ದು, ಸಭೆಯಲ್ಲಿ ವಕೀಲರ ಬದಾವಣೆ ಮಾಡಿಸಿ, ನಗರಸಭೆಗೆ ಆಸ್ತಿಗಳನ್ನು ಬರುವ ಹಾಗೆ ಒತ್ತಡ ಹೇರಲಾಗುವುದು ಎಂದು ಪೌರಾಯುಕ್ತ ಎಸ್.ಪ್ರಸಾದ್ರೆಡ್ಡಿ ತಿಳಿಸಿದರು.