ಸಂವಿಧಾನ ಪೀಠಿಕೆ ವಾಚನ: 2.27 ಕೋಟಿ ಜನರು ನೋಂದಣಿ !

dr.h.c. mahadevappa
Published on

ಬೆಂಗಳೂರು: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಗೆ ರಾಜ್ಯ, ದೇಶ, ವಿದೇಶಗಳಿಂದ 2.27 ಕೋಟಿ ಜನರು ನೋಂದಣಿ ಮಾಡಿಕೊಂಡಿದ್ದಾರೆ! ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಶಾಲೆ, ಕಾಲೇಜು ಮಕ್ಕಳು, ಖಾಸಗಿ ಉದ್ಯಮ ಸಂಸ್ಥೆಗಳು, ಸರ್ಕಾರಿ ಇಲಾಖೆಗಳು, ಬ್ಯಾಂಕ್‌ಗಳು ಹಾಗೂ ಸಾರ್ವಜನಿಕರು ಸೇರಿದಂತೆ ಇವರೆಗೆ 2, 27, 89 ಸಾವಿರಕ್ಕಿಂತಲೂ ಹೆಚ್ಚಿನ ಜನರು ಆನ್‌ಲೈನ್ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಂತಾರಾಷ್ಟ್ರೀಯ ಸಂವಿಧಾನ ದಿನಾಚರಣೆಯ ಸಂವಿಧಾನ ಪೀಠಿಕೆ ವಾಚನಕ್ಕಾಗಿ ಒಪ್ಪಿ ಜನರು ನೊಂದಾಯಿಸಿಕೊಂಡಿದ್ದಾರೆ. ಸೆ. 14 ಸಂಜೆ 6 ಗಂಟೆಯವರೆಗೆ ನೋದಾಯಿಸಿಕೊಳ್ಳಲು ಅವಕಾಶವಿದ್ದು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನೊಂದಾಯಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಸೆ.15 ರಂದು ಸಂವಿಧಾನದ ಓದು

ಸಂವಿಧಾನವನ್ನು ಗೌರವಿಸುವ ದೃಷ್ಟಿಯಿಂದ ಯುವಜನರಲ್ಲಿ ಸಂವಿಧಾನ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಸೆ.15 ರಂದು ಬೆಳಗ್ಗೆ 10ಕ್ಕೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಬೃಹತ್ ಮಟ್ಟದಲ್ಲಿ ಸಂವಿಧಾನ ವಾಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ದೇಶಾದ್ಯಂತ ಚಳವಳಿಯಾಗಬೇಕು

ಪ್ರಜಾಪ್ರಭುತ್ವ ದಿನಾಚರಣೆಯನ್ನು ಜಗತ್ತಿನಾದ್ಯಾಂತ ಆಚರಿಸಲಾಗುತ್ತಿದೆ. ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ನಮ್ಮ ಭಾರತದ ಸಂವಿಧಾನ ಮಾದರಿ ಸಂವಿಧಾನವಾಗಿದೆ. ಸಂವಿಧಾನದ ಪೀಠಿಕೆ ವಾಚನ ಪ್ರಸ್ತುತ ದಿನಮಾನಗಳಲ್ಲಿ ಆಚರಿಸುವ ಮೂಲಕ ಇದೊಂದು ದೇಶಾದ್ಯಂತ ಮಹತ್ವದ ಚಳುವಳಿಯಾಗಬೇಕು ಎಂದರು.

ಪ್ರಜಾಪ್ರಭುತ್ವದ ವ್ಯವಸ್ಥೆ ಬಲವರ್ಧನೆ ಆಗಬೇಕಾದರೆ ಸಂವಿಧಾನದ ಪೀಠಿಕೆಯನ್ನು ಅರ್ಥೈಸಿಕೊಳ್ಳಬೇಕು. ಸಂವಿಧಾನದ ಪೀಠಿಕೆಯಲ್ಲಿಯೇ ಸಂವಿಧಾನದ ವಿಷಯಗಳು ಅಡಕವಾಗಿವೆ, ಅದನ್ನು ಮಕ್ಕಳಿಗೆ ಬಾಲ್ಯದಿಂದಲೇ ಅರ್ಥಮಾಡಿಸಬೇಕಲ್ಲದೇ ಇಂದಿನ ಯುವಪೀಳಿಗೆಗೆ ಸಂವಿಧಾನದ ಮೂಲ ಉದ್ದೇಶಗಳನ್ನು ತಿಳಿಸಿಕೊಡಬೇಕಾಗಿದೆ ಎಂದು ಹೇಳಿದರು.

ಭಾರತ ದೇಶ ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶವಾಗಿದೆ. ಇದೆಲ್ಲ ಸಾಧ್ಯವಾಗಿರುವುದು ನಮ್ಮ ಸಂವಿಧಾನದಿಂದ. ಯಾವುದೇ ಸಮುದಾಯ ಅಥವಾ ಧರ್ಮ ಪರಸ್ಪರ ದ್ವೇಷ ಅಸೂಯೆಗಳಿಗೆ ಅವಕಾಶ ಕೊಡದೆ ಸಂವಿಧಾನವನ್ನು ರಕ್ಷಣೆ ಮಾಡುವಲ್ಲಿ ಸಫಲವಾಗಬೇಕು. ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸಂವಿಧಾನ ಪೀಠಿಕೆ ಓದುವುದು ಒಂದು ಆಂದೋಲನವಾಗಬೇಕು ಎಂದು ತಿಳಿಸಿದರು.

ಶಾಲೆ, ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯ

ಶಾಲೆ-ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಸಂವಿಧಾನ ಪೀಠಿಕೆಯನ್ನು ಕಡ್ಡಾಯವಾಗಿ ಓದಿಸಲು ಸರ್ಕಾರ ತೀರ್ಮಾನಿಸಿದ್ದು, ಈಗಾಗಲೇ ಆದೇಶ ಹೊರಡಿಲಾಗಿದೆ. ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಸಭೆ, ಸಮಾರಂಭಕ್ಕೂ ಮುನ್ನ ಸಂವಿಧಾನ ಪೀಠಿಕೆ ಓದುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ಹೇಳಿದರು. ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net