ಮಳೆ ಮುಂಗಾರಿಗೆ ಸಂಕಷ್ಟ, ಹಿಂಗಾರಿಗೆ ವರದಾನ

18-RNR-01
Published on

ರಾಣೆಬೆನ್ನೂರ: ನಗರ ಸೇರಿ ತಾಲೂಕಿನಾದ್ಯಂತ ನಾಲ್ಕೆ$ದು ದಿನ ಸುರಿದ ಭಾರಿ ಮಳೆ ಮುಂಗಾರು ಬೆಳೆಗಳಿಗೆ ಸಂಕಷ್ಟ ತಂದೊಡ್ಡಿದ್ದರೆ, ಮತ್ತೊಂದೆಡೆ ಹಿಂಗಾರು ಬೆಳೆ ಬೆಳೆಯಲು ಭೂಮಿಯನ್ನು ಹದ ಮಾಡಿದಂತಾಗಿದೆ.
ನಿರಂತರ ಮಳೆಗೆ ತಾಲೂಕಿನ ತುಮ್ಮಿನಕಟ್ಟಿ, ಕುಪ್ಪೇಲೂರ, ಲಿಂಗದಹಳ್ಳಿ, ಸರ್ವಂದ, ಜೋಯಿಸರಹರಳಹಳ್ಳಿ ಸೇರಿ ಬಹಳಷ್ಟು ಹಳ್ಳಿಗಳಲ್ಲಿ ಕಟಾವಿಗೆ ಸಿದ್ಧಗೊಂಡು ನಿಂತಿದ್ದ ಮೆಕ್ಕೆಜೋಳ ಬೆಳೆ ಸಂಪೂರ್ಣ ಜಲಾವೃತಗೊಂಡಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿಗೆ ರೈತರನ್ನು ದೂಡಿದೆ.
ಹೂವಿನ ಬೆಳೆಗಾರರು ಆಥಿರ್ಕ ಸಂಕಷ್ಟಕ್ಕೆ…
ತಾಲೂಕಿನ ಲಿಂಗದಹಳ್ಳಿ, ತುಮ್ಮಿನಕಟ್ಟಿ, ಲಿಂಗದಹಳ್ಳಿ, ಅಸುಂಡಿ, ಹೂಲಿಹಳ್ಳಿ ಸೇರಿ ವಿವಿಧ ಗ್ರಾಮಗಳ ರೈತರು ದೀಪಾವಳಿ ಹಬ್ಬಕ್ಕೆ ಒಳ್ಳೆಯ ಬೆಲೆ ಬರಲಿದೆ ಎಂದು ಸೇವಂತಿ, ಚೆಂಡು ಹೂವು ಬೆಳೆಯಲು ಸಸಿಗಳನ್ನು ನಾಟಿ ಮಾಡಿದ್ದರು. ಗೊಬ್ಬರ, ಸಸಿ ಹಾಗೂ ಕೂಲಿ ಕಾಮಿರ್ಕರ ಖರ್ಚು ಎಂದು 1 ಎಕರೆಗೆ 40 ಸಾವಿರ ರೂ.ಗೂ ಅಧಿಕ ಖರ್ಚು ಮಾಡಿದ್ದಾರೆ. ರೈತರು ಲೆಕ್ಕಾಚಾರ ಹಾಕಿದಂತೆ ದೀಪಾವಳಿ ಸಮಯಕ್ಕೆ ಹೂವು ಕೈಗೆ ಬಂದಿದ್ದರೆ ಸಾವಿರಾರು ರೂ. ಲಾಭವಾಗುತ್ತಿತ್ತು.
ಆದರೆ, ನಿರಂತರ ಮಳೆಯಿಂದ ಹೂವಿನ ಸಸಿ ನಾಟಿ ಮಾಡಿದ್ದ ಕೆಲವು ಜಮೀನುಗಳು ಸಂಪೂರ್ಣ ನೀರಿನಲ್ಲಿ ಮುಳಗಿ ಹೋಗಿದ್ದರೆ, ಇನ್ನೂ ಕೆಲ ಜಮೀನುಗಳಲ್ಲಿ ಬೆಳೆ ನಿಂತಿದ್ದ ಹೂವಿನ ಗಿಡಗಳು ಮಕಾಡೆ ಮಲಗಿ ಹೋಗಿವೆ. ಇದರಿಂದ ಹಬ್ಬದ ಸಂತಸ ನೋಡಬೇಕಿದ್ದ ಬೆಳೆಗಾರರು ಕಣ್ಣೀರು ಹಾಕುವಂತಾಗಿದೆ.
ಹಿಂಗಾರಿಗೆ ವರದಾನ…
ಮುಂಗಾರು ಬೆಳೆ ಹಾಗೂ ಹೂವಿನ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿರುವ ಮಳೆ ಹಿಂಗಾರು ಬಿತ್ತನೆ ಮಾಡುವ ರೈತರಿಗೆ ವರದಾನವಾಗಿದೆ. ತಾಲೂಕಿನಲ್ಲಿ ಪ್ರಸಕ್ತ ವರ್ಷ 15 ಸಾವಿರ ಹೆಕ್ಟೇರ್​ ಹಿಂಗಾರು ಜೋಳ, 3337 ಹೆಕ್ಟೇರ್​ ಗೋವಿನಜೋಳ, 1383 ಹೆಕ್ಟೇರ್​ ಕಡಲೆ, 200 ಹೆಕ್ಟೇರ್​ ಅಲಸಂದಿ, 573 ಹೆಕ್ಟೇರ್​ ಶೇಂಗಾ, 900 ಹೆಕ್ಟೇರ್​ ಸೂರ್ಯಕಾಂತಿ ಸೇರಿ 21,901 ಹೆಕ್ಟೇರ್​ ಪ್ರದೇಶದಲ್ಲಿ ಹಿಂಗಾರು ಬಿತ್ತನೆ ಗುರಿ ಹೊಂದಲಾಗಿದೆ. ಅದರಲ್ಲಿ ಈಗಾಗಲೇ 1076 ಹೆಕ್ಟೇರ್​ ಹಿಂಗಾರು ಬೆಳೆ ಬಿತ್ತನೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net