

ಹೈದರಾಬಾದ್: ಮದುವೆಯಾದರೂ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಕಾನ್ಸ್ಟೆಬಲ್ ತನ್ನ ಹೆಂಡತಿ ಕೊಲೆಗೆ ಸುಪಾರಿ ನೀಡಿ ಹತ್ಯೆ ಮಾಡಿಸಿರುವ ಘಟನೆ ತೆಲಂಗಾಣದ ಮಂಚೇರಿಯಲ್ ಜಿಲ್ಲೆಯಲ್ಲಿ ನಡೆದಿದೆ.
ಶರಣ್ಯಾ (31) ಎಂಬಾಕೆಯೇ ಮೃತ ದುರ್ದೈವಿಯಾಗಿದ್ದು, ಇದೇ ತಿಂಗಳ 10ರಂದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಈ ಪ್ರಕರಣದ ಪ್ರಮುಖ ಆರೋಪಿಯನ್ನು ಆಕೆಯ ಪತಿ ಸೈಯದ್ ಜಿಯಾ-ಉಲ್-ಹಕ್ ಎಂದು ಪೊಲೀಸರು ಗುರುತಿಸಿದ್ದು, ಆತನ ಜತೆಗೆ ಚಂದ್ರಗಿರಿ ಸಾಯಿ ಕುಮಾರ್, ದರಂಗುಲ ರಾಜ್ ಕುಮಾರ್, ಆತನ ಸಹೋದರ ಶಿವ, ಪಳ್ಳಿಕೊಂಡ ಅನಿಲ್ ಕುಮಾರ್, ಶಿವಕೃಷ್ಣ, ವೇಮುಲ, ಸಾಯಿ, ಅಮೇರ್ ಗೌರಿ ಎಂಬುವರನ್ನು ಬಂಧಿಸಲಾಗಿದೆ.
ಬೇರೊಬ್ಬ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಸೈಯದ್ ಪತ್ನಿಗೆ ಸುಪಾರಿ ನೀಡಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಸಿಐಎಸ್ ಎಫ್ ಕಾನ್ ಸ್ಟೆಬಲ್ ಸೈಯದ್ ಜಿಯಾ ಉಲ್ಹಾಕ್ ತನ್ನ ಮನೆಯ ಬಳಿ ಶರಣ್ಯ ಎಂಬಾಕೆಯನ್ನು ಪ್ರೀತಿಸಿ 2013ರಲ್ಲಿ ವಿವಾಹವಾಗಿದ್ದು, ಮನಸ್ವಿನಿ ಎಂಬ ಮಗಳಿದ್ದಳು. ಸೈಯದ್ ಹೈದರಾಬಾದ್ನಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿನ ಮತ್ತೊಬ್ಬ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದು, ಈ ವಿಚಾರ ಪತ್ನಿ ಶರಣ್ಯ ಅವರಿಗೆ ತಿಳಿದು ದಂಪತಿ ನಡುವೆ ಜಗಳವಾಗಿದೆ.
ವಿಚ್ಛೇದನ ನೀಡದಿದ್ದರೆ ಶರಣ್ಯಾಗೆ ಸಾಯಿಸುವುದಾಗಿಯೂ ಸೈಯದ್ ಬೆದರಿಕೆ ಹಾಕಿದ್ದು, ಆದರೆ ಆಕೆ ವಿಚ್ಛೇದನ ನೀಡಲು ನಿರಾಕರಿಸಿದ್ದಳು. ಬಕ್ರೀದ್ ನಿಮಿತ್ತ ತನ್ನ ಸ್ನೇಹಿತ ಚಂದ್ರಗಿರಿ ಸಾಯಿಕುಮಾರ್ ಜತೆ ಮಂಚೇರಿಯಲ್ಗೆ ಬಂದಿದ್ದ ಆತ ಪತ್ನಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿ ಸಾಯಿಕುಮಾರ್ ಮತ್ತಿತರರಿಗೆ ಸುಪಾರಿ ನೀಡಿ 9 ಲಕ್ಷ ರೂ. ನೀಡಿದ್ದ. ಇದೇ ತಿಂಗಳ 10ರಂದು ಸಂಜೆ 6 ಗಂಟೆಗೆ ಶರಣ್ಯಾ ರೈಲ್ವೆ ಹಳಿ ಬಳಿಯಿದ್ದಾಗ ಪೊದೆಯಲ್ಲಿದ್ದ ರಾಜ್ಕುಮಾರ್ ಮತ್ತು ಶಿವ ಆಕೆಯ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಮನಬಂದಂತೆ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪತಿ ಸೈಯದ್ನ ಮೇಲೆ ಅನುಮಾನ ವ್ಯಕ್ತಪಡಿಸಿ ತನಿಖೆ ಆರಂಭಿಸಿದ್ದಾರೆ. ತಂತ್ರಜ್ಞಾನದ ಸಹಾಯದಿಂದ ತನಿಖೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ. ಶರಣ್ಯಳನ್ನು ತಾನೇ ಕೊಂದಿರುವುದಾಗಿ ಕಾನ್ಸ್ಟೆಬಲ್ ಸೈಯದ್ ತಪ್ಪೊಪ್ಪಿಕೊಂಡಿದ್ದಾನೆ. ಈತನ ನೆರವಿನಿಂದ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಇದರಲ್ಲಿ ರವಿತೇಜ ಎಂಬ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.(ಏಜೆನ್ಸೀಸ್)