ಧಾರ್ಮಿಕ ಭಾವನೆಗೆ ಘಾಸಿಗೊಳಿಸುವ ಷಡ್ಯಂತ್ರ

protest (10)
ಧರ್ಮಸ್ಥಳ ಭಕ್ತಾದಿಗಳ ವೇದಿಕೆ ವತಿಯಿಂದ ಪಟ್ಟಣದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿದರು. ಅರ್.ಎಂ. ಮಂಜುನಾಥಗೌಡ, ಡಾ. ಜೀವಂಧರ ಜೈನ್,ನವೀನ್ ಹೆದ್ದೂರು, ಸೊಪ್ಪುಗುಡ್ಡೆ ರಾಘವೇಂದ್ರ ಇದ್ದರು.
Published on

ತೀರ್ಥಹಳ್ಳಿ: ಧರ್ಮಸ್ಥಳ ಕ್ಷೇತ್ರದ ವಿರುದ್ಧ ಪಿತೂರಿ ಮಾಡಿ ಪಾವಿತ್ರೃಕ್ಕೆ ಧಕ್ಕೆ ತರಲು ಯತ್ನಿಸಿದವರ ವಿರುದ್ಧ ಸೂಕ್ತ ತನಿಖೆ ನಡೆಸಬೇಕು. ಅಪಪ್ರಚಾರವನ್ನು ತಡೆಯಬೇಕು ಎಂದು ಒತ್ತಾಯಿಸಿ ಧರ್ಮಸ್ಥಳ ಭಕ್ತಾದಿಗಳ ವೇದಿಕೆಯಿಂದ ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಧರ್ಮಸ್ಥಳ ಕ್ಷೇತ್ರದ ಮೂಲಕ ಡಾ. ವೀರೇಂದ್ರ ಹೆಗ್ಗಡೆ ಅವರು ಮಾಡುತ್ತಿದ್ದಾರೆ. ಸನಾತನ ಹಿಂದು ಧರ್ಮ ಮತ್ತು ಧಾರ್ಮಿಕ ಭಾವನೆಗಳ ಘಾಸಿ ಉಂಟುಮಾಡಲು ಪಿತೂರಿ ನಡೆಯುತ್ತಿದೆ. ಈ ಬಗ್ಗೆ ಹಿಂದುಗಳು ಎಚ್ಚೆತ್ತುಕೊಳ್ಳಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.

ತಲೆಬುರುಡೆಯನ್ನು ತಂದ ಮುಸುಕುಧಾರಿಯ ಕೃತ್ಯವನ್ನು ಪರಿಶೀಲಿಸಲ್ಲ. ಸಿನಿಮಾ ರೀತಿ ಕಥೆ ಹೆಣೆದು ಷಡ್ಯಂತ್ರ ಹೂಡುವ ಮೂಲಕ ಧರ್ಮಸ್ಥಳದ ಖ್ಯಾತಿಗೆ ಮಸಿ ಬಳಿಯುವ ಪ್ರಯತ್ನ ಮಾಡಲಾಗಿದೆ. ಇದರ ಹಿಂದೆ ಮಿಷನರಿಗಳ ಪಾತ್ರವೂ ಇದೆ ಎಂದು ಆರೋಪಿಸಿದರು.

ಮುಸುಕುಧಾರಿ ವಿರುದ್ಧ ಪೋಲಿಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳಬೇಕಿತ್ತು. ಎಸ್‌ಐಟಿ ರಚನೆ ಮಾಡುವ ಮೂಲಕ ಸರ್ಕಾರ ಕೂಡ ಈ ವಿಚಾರದಲ್ಲಿ ವಿಚಲಿತವಾಗಿದೆ. ಅನ್ಯಧರ್ಮೀಯರ ಬಗ್ಗೆ ಧ್ವನಿ ಎತ್ತಲಾಗದ ಎಡಪಂಥೀಯರು ಮತ್ತು ಬುದ್ಧಿಜೀವಿಗಳು ಸಿನಿಕತನ ಇದಕ್ಕೆ ಪ್ರೇರಣೆ. ಸೌಮ್ಯವಾದಿಗಳಾದ ಹಿಂದುಗಳ ತಾಳ್ಮೆ ಪರೀಕ್ಷಿಸಬೇಡಿ ಎಂದು ಎಚ್ಚರಿಸಿದರು.

ದಿಕ್ಸೂಚಿ ಭಾಷಣ ಮಾಡಿದ ವಸಂತ ಗಿಳಿಯಾರ್, ಸೌಜನ್ಯಾ ಪ್ರಕರಣದ ಹೆಸರಿನಲ್ಲಿ ಹಣ ಗಳಿಸುವ ತಂತ್ರಗಾರಿಕೆ ನಡೆದಿದೆ. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸಿಡಿಸಿದ ಭಯೋತ್ಪಾದಕರ ತಂಡ ಮತ್ತು ನಕ್ಸಲರ ತಂಡದ ಗುರಿಯೂ ಧರ್ಮಸ್ಥಳವಾಗಿತ್ತು. ಇದರ ವಿರುದ್ಧ ಹೋರಾಡಲು ನಾವು ಸಿದ್ಧರಾಗಬೇಕು ಎಂದರು.

ಎಪಿಎಂಸಿ ಆವರಣದಿಂದ ಮೆರವಣಿಗೆ ಸಾಗಿ ಬಂದ ಮಾರ್ಗದಲ್ಲಿ ಹಿಂದು ಸಮುದಾಯದವರು ಅಂಗಡಿ ಮುಂಗಟ್ಟುಗಳ ಬಾಗಿಲು ಮುಚ್ಚಿ ಪ್ರತಿಭಟನೆಗೆ ಸಹಕರಿಸಿದರು. ಪಪಂ ಉಪಾಧ್ಯಕ್ಷೆ ಗೀತಾ ರಮೇಶ್, ಧಾರ್ಮಿಕ ಮುಖಂಡ ಡಾ. ಜೀವಂಧರ ಜೈನ್, ಪ್ರತಿಭಟನೆಯ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ, ಚಂದವಳ್ಳಿ ಸೋಮಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net