

ಕಲ್ಕುಂದ: ಆಡಳಿತ ಮಂಡಳಿ ಹಾಗೂ ಹಾಲು ಉತ್ಪಾದಕರ ನಡುವೆ ಹೊಂದಾಣಿಕೆ ಉತ್ತಮವಾಗಿದ್ದರೆ ಸಂಘವು ಉನ್ನತಿಯತ್ತ ಸಾಗಲಿದೆ ಎಂದು ಕಲ್ಕುಂದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆ.ಬಿ. ಚಂದ್ರಶೇಖರ್ ಹೇಳಿದರು.
ನಂಜನಗೂಡು ತಾಲೂಕು ಕಲ್ಕುಂದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉತ್ಪಾದಕರು ಗುಣಮಟ್ಟದ ಹಾಲು ಪೂರೈಕೆ ಮಾಡಬೇಕು. ಪ್ರಸ್ತುತ ಸಾಲಿನಲ್ಲಿ ನಮ್ಮ ಸಂಘ 54.7 ಸಾವಿರ ರೂ. ನಿವ್ವಳ ಲಾಭಗಳಿಸಿದೆ ಎಂದರು.
ಮೈಸೂರು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾದ ನೀಲಾಂಬಿಕೆ ಮಹೇಶ್ ಮಾತನಾಡಿ, ಕಲ್ಕುಂದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 20 ಲಕ್ಷ ರೂ. ವೆಚ್ಚದಲ್ಲಿ ಬಿಎಂಸಿ ಕೇಂದ್ರ ನಿರ್ಮಿಸಿಕೊಡಲಾಗಿದ್ದು, 60ವರ್ಷ ಮೇಲ್ಪಟ್ಟ ಸಂಘದ ಸದಸ್ಯರು ಅಕಾಲಿಕ ಮರಣ ಹೊಂದಿದರೆ ವಾರಸುದಾರರಿಗೆ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ 15 ಸಾವಿರ ರೂ. ನೀಡಲಾಗುತ್ತದೆ. ಹಾಲು ಉತ್ಪಾದಕರ ಮನೆಯ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ 10 ಕೋಟಿ ರೂ. ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಾಣ ಮಾಡಲಾಗಿದೆ. ಇವುಗಳ ಉಪಯೋಗವನ್ನು ರೈತರು ಬಳಸಿಕೊಳ್ಳಬೇಕೆಂದರು.
ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಡಾ.ಅಕ್ಷಯ್ಕುಮಾರ್ ಹಸು ಸಾಕಣೆಯ ಬಗ್ಗೆ ರೈತರಿಗೆ ವಿವರಿಸಿದರು. ಸಂಘದ ನಿರ್ದೇಶಕ ಮಹದೇವಪ್ಪ, ಪ್ರಕಾಶ್, ಭೋಗೇಶ್, ರಾಜಶೇಖರ್, ನಂದಿನಿ, ಸುಂದ್ರಮ್ಮ, ಕಾರ್ಯದರ್ಶಿ ಬಿ.ಎಸ್. ನಾಗಲಾಂಬಿಕೆ ಹಾಗೂ ಹಾಲು ಉತ್ಪಾದಕರು, ಗ್ರಾಮಸ್ಥರು ಇದ್ದರು.