ಮೇಲ್ಸೇತುವೆ ನಿರ್ಮಿಸುವ ಸ್ಥಳೀಯರ ಮನವಿ ಪರಿಗಣಿಸಿ : ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹೈ ಸೂಚನೆ

highcourt
Published on

ಬೆಂಗಳೂರು: ಬೆಂಗಳೂರು ಚೆನ್ನೈ ಕಾರಿಡಾರ್ ಮಾರ್ಗದಲ್ಲಿನ ಹೊಸಕೋಟೆ ತಾಲ್ಲೂಕಿನ ಕೊಳತೂರು ಜಂಕ್ಷನ್ ಬಳಿ ಮೇಲ್ಸೇತುವೆ ನಿರ್ಮಿಸುವಂತೆ ಕೋರಿ ಸ್ಥಳೀಯರು ಸಲ್ಲಿಸಿರುವ ಮನವಿ ಪತ್ರವನ್ನು ಎಂಟು ವಾರದಲ್ಲಿ ಪರಿಗಣಿಸಿ ಕಾನೂನು ಪ್ರಕಾರ ತೀರ್ಮಾನ ಕೈಗೊಳ್ಳುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹೈಕೋರ್ಟ್ ಬುಧವಾರ ಸೂಚಿಸಿದೆ.

ಮೇಲ್ಸೇತುವೆ ನಿರ್ಮಾಣ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ಕೃಷಿಕರಾದ ಕೆ.ವಿ. ರವಿಕುಮಾರ್ ಸೇರಿದಂತೆ ಕೊಳತೂರು, ಅಪ್ಪಸಂದ್ರ, ಸೋಲೂರು, ಊರಹಳ್ಳಿ ಗ್ರಾಮಗಳ ಒಟ್ಟು 13 ನಿವಾಸಿಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿಸಲ್ಲಿಸಿದರು.

ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ಬೆಂಗಳೂರುಚೆನ್ನೈ ಕಾರಿಡಾರ್ ಮಾರ್ಗದಲ್ಲಿನ ಹೊಸಕೋಟೆ ತಾಲ್ಲೂಕಿನ ಕೊಳತೂರು ಜಂಕ್ಷನ್ ಬಳಿ ಮೇಲ್ಸೇತುವೆ ನಿರ್ಮಿಸುವಂತೆ ಕೋರಿ ಸ್ಥಳೀಯರು ಸಲ್ಲಿಸಿರುವ ಮನವಿ ಪತ್ರವನ್ನು ಎಂಟು ವಾರದಲ್ಲಿ ಪರಿಗಣಿಸಿ ಕಾನೂನು ಪ್ರಕಾರ ತೀರ್ಮಾನ ಕೈಗೊಳ್ಳುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹೈಕೋರ್ಟ್ ಬುಧವಾರ ಸೂಚಿಸಿದೆ.

ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲ ಎಂ.ಶಿವಪ್ರಕಾಶ್, ಕೊಳತೂರು ಮತ್ತು ಸುತ್ತಲಿನ 20 ಗ್ರಾಮಗಳನ್ನು ಸಂಪರ್ಕಿಸುವ ಬೆಂಗಳೂರುಕೋಲಾರ ರಾಷ್ಟ್ರೀಯ ಹೆದ್ದಾರಿ-75ರ ಸಮೀಪದಲ್ಲೇ ಜಿಲ್ಲಾ ತಾಯಿ ಮಕ್ಕಳ ಆಸ್ಪತ್ರೆಯನ್ನು 40 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಬೆಂಗಳೂರು ಚೆನ್ನೈ ಕಾರಿಡಾರ್ ರಸ್ತೆಯಿಂದ ಕೊಳತೂರು ಗ್ರಾಮದ ಮುಖ್ಯ ದ್ವಾರಕ್ಕೆ ಲಿಂಕ್ ರಸ್ತೆ ಕೊಟ್ಟು ಅಡ್ಡಿಪಡಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರು ಮುಖ್ಯವಾಗಿ ತಾಯಿ ಮಕ್ಕಳ ಆಸ್ಪತ್ರೆಗೆ ಬರುವವರು ಸುತ್ತಿಕೊಂಡು ಬರಬೇಕಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಸುತ್ತಿಕೊಂಡು ಆಸ್ಪತ್ರೆಗೆ ಹೋಗುವ ವೇಳೆ ಉಂಟಾಗುವ ಅನಾಹುತಗಳಿಂದ ಜನರಿಗೆ ತೊಂದರೆಯಾಗುತ್ತದೆ ಎಂದು ವಿವರಿಸಿದರು.

ಈ ಸಮಸ್ಯೆಯನ್ನು ನಿವಾರಿಸಲು ಜಂಕ್ಷನ್ ಅಲ್ಲಿ ಮೇಲ್ಸೇತುವೆ ನಿರ್ಮಿಸಿ, ಜನ ಹಾಗೂ ವಾಹನ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಕೋರಿ ಸ್ಥಳೀಯರು ಹಲವು ಮನವಿ ಸಲ್ಲಿಸಿದ್ದಾರೆ. ಈವರೆಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್.ಎಚ್.ಎ.ಐ) ಅಧಿಕಾರಿಗಳು ಆ ಮನವಿ ಪರಿಗಣಿಸಿಲ್ಲ. ಆದ್ದರಿಂದ ಕೊಳತೂರು ಮತ್ತು ಸುತ್ತಲಿನ 20 ಗ್ರಾಮಗಳನ್ನು ಸಂಧಿಸುವ ರಾಷ್ಟ್ರೀಯ ಹೆದ್ದಾರಿ75 ಹಾಗೂ 648ರ ಬೆಂಗಳೂರುಚೆನ್ನೈ ಎಕ್ಸ್‌ಪ್ರೆಸ್ ವೇ ಸಂಪರ್ಕ ಕಲ್ಪಿಸುವ ಕೊಳತೂರು ಜಂಕ್ಷನ್ ಬಳಿ ಮೇಲ್ಸೇತುವೆ ನಿರ್ಮಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮತ್ತು ಎನ್.ಎಚ್.ಎ.ಐಗೆ ನಿರ್ದೇಶಿಸುವಂತೆ ಕೋರಿದರು.

ವಾದ ಆಲಿಸಿದ ನ್ಯಾಯಪೀಠ ಕೊಳತೂರು ಜಂಕ್ಷನ್ ಬಳಿ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಕೋರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷರು, ಅದರ ಯೋಜನಾ ವಿಭಾಗದ ನಿರ್ದೇಶಕರಿಗೆ ಅರ್ಜಿದಾರರು ಮನವಿ ಪತ್ರ ಸಲ್ಲಿಸಿದ್ದಾರೆ. ಆ ಮನವಿ ಪತ್ರವನ್ನು ಎಂಟು ವಾರದಲ್ಲಿ ಕಾನೂನು ಪ್ರಕಾರ ಪರಿಗಣಿಸಿ ನಿರ್ಧಾರವನ್ನು ತಿಳಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net