ಸಂಪಾದಕೀಯ | ಗಂಭೀರವಾಗಿ ಪರಿಗಣಿಸಿ

ವಿಜಯವಾಣಿ (2) (1)
Published on

ರಾಜ್ಯದಲ್ಲಿ ನಾಯಿ ಕಡಿತದ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ. ರೇಬಿಸ್​ನಿಂದ ಸಾವುಗಳ ಸಂಖ್ಯೆ ಏರಿಕೆಯಾಗಿರುವುದು ಶೋಚನೀಯ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಶ್ವಾನಗಳ ಹಾವಳಿ ಮಿತಿ ಮೀರಿದೆ. ಬೆಳಗ್ಗೆ ವಾಯುವಿಹಾರಕ್ಕೆ ಹೋಗುವವರು, ಮನೆ ಬಳಿ ಆಟವಾಡುವ ಮಕ್ಕಳು, ಶಾಲೆಗೆ ಹೋಗುವ ವಿದ್ಯಾರ್ಥಿಗಳು, ಪಾದಚಾರಿಗಳು ಮತ್ತು ದ್ವಿಚಕ್ರವಾಹನ ಸವಾರರೇ ಈ ಬೀದಿನಾಯಿಗಳ ಕಾಟಕ್ಕೆ ‘ತುತ್ತಾ’ಗುತ್ತಿದ್ದಾರೆ. ಬೀದಿ ನಾಯಿಗಳು ಇದ್ದಕ್ಕಿದ್ದಂತೆ ಅನಿರೀಕ್ಷಿತವಾಗಿ ಮೈಮೇಲೆ ಎರಗಿ ಕಚ್ಚುವುದು ಸಾಮಾನ್ಯವಾಗಿಬಿಟ್ಟಿದೆ. ದಿನೇದಿನೆ ಇಂತಹ ಪ್ರಕರಣಗಳು ಹೆಚ್ಚುತ್ತಲೇ ಇವೆ.

ಸಾಕಿರುವ ನಾಯಿಗಳಿಗೆ ಜನರು ತಮ್ಮ ಮನೆಗಳಲ್ಲೇ ಆಹಾರ ನೀಡಿ, ಆವರಣದೊಳಗೆ ಕಟ್ಟಿ ಹಾಕುವುದರಿಂದಾಗಿ ಅವುಗಳಿಂದ ಸಾರ್ವಜನಿಕರಿಗೆ ಹೆಚ್ಚೇನೂ ಸಮಸ್ಯೆ ಇಲ್ಲ. ಬೀದಿ ನಾಯಿಗಳಿಗೆ ಮಾಂಸದ ಅಂಗಡಿ, ಹೋಟೆಲ್​ಗಳ ಬಳಿ ಆಹಾರ ಸಿಗುತ್ತಿರುವ ಕಾರಣ ಅವು ಅಲ್ಲೇ ಠಿಕಾಣಿ ಹೂಡಿರುತ್ತವೆ. ಆಹಾರ ಸಿಗದೇ ಇದ್ದಾಗ ಮನುಷ್ಯರ ಮೇಲೆ ದಾಳಿ ಮಾಡುತ್ತವೆ. ಚಿಕ್ಕಮಗಳೂರಿನಲ್ಲಿ ಬೀದಿ ನಾಯಿಗಳ ಕಾಟ ಜಾಸ್ತಿಯಾಗಿರುವ ಕಾರಣ ಅವುಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಆಹಾರ ಹಾಕುವುದನ್ನು ಅಲ್ಲಿನ ನಗರಸಭೆ ಇತ್ತೀಚೆಗೆ ನಿಷೇಧಿಸಿದೆ. ಮನೆಗಳಲ್ಲಿ ಉಳಿದಿರುವ ಆಹಾರವನ್ನು ತಂದು ನಾಯಿಗಳಿಗೋಸ್ಕರ ಬೀದಿಯಲ್ಲಿ ಹಾಕಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ನಗರಸಭೆ ಎಚ್ಚರಿಕೆಯಾಗಿದೆ.

ಆದರೆ ರಾಜಧಾನಿ ಬೆಂಗಳೂರಿನಲ್ಲಿ ಬೀದಿನಾಯಿಗಳಿಗೆ ಮಾಂಸಾಹಾರವನ್ನು ಮಹಾನಗರ ಪಾಲಿಕೆಯ ವತಿಯಿಂದಲೇ ನೀಡಲು ನಿರ್ಧರಿಸಿರುವುದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಜನರಿಗೆ ಉತ್ತಮ ರಸ್ತೆ ಮತ್ತಿತರ ಮೂಲಭೂತ ಸೌಕರ್ಯಗಳ ಕೊರತೆ ಇರುವಾಗ, ಪಾಲಿಕೆ ಅದರ ಬಗ್ಗೆ ಗಮನಹರಿಸದೆ, ಬೀದಿ ನಾಯಿಗಳಿಗೆ ಮಾಂಸಾಹಾರ ಹಾಕುವುದಕ್ಕಾಗಿ ಕೋಟ್ಯಂತರ ರೂ. ವ್ಯಯಿಸುತ್ತಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಇತ್ತೀಚೆಗೆ ಸುಪ್ರೀಂಕೋರ್ಟ್​ನಲ್ಲಿ ಕೂಡ ಬೀದಿನಾಯಿಗಳ ಹಾವಳಿ ಕುರಿತ ಪ್ರಕರಣವೊಂದು ವಿಚಾರಣೆಗೆ ಬಂದಿತ್ತು.

‘ಬೀದಿನಾಯಿಗಳಿಗೆ ಆಹಾರ ಹಾಕುತ್ತಿರುವ ಕಾರಣಕ್ಕೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ’ ಎಂದು ನೋಯ್ಡಾದ ವ್ಯಕ್ತಿಯೊಬ್ಬರು ಕೋರ್ಟ್ ಮೆಟ್ಟಿಲೇರಿದ ಪ್ರಕರಣ ಅದು. ಅದಕ್ಕೆ ಸುಪ್ರೀಂಕೋರ್ಟ್ ನ್ಯಾಯಾಧೀಶರು ಪ್ರತಿಕ್ರಿಯಿಸಿ, ‘ನಮ್ಮ ಸಮಾಜದಲ್ಲಿ ಬೀದಿನಾಯಿಗಳಿಗೆ ಬೇಕಾದಷ್ಟು ಜಾಗ ಇದೆ, ಮನುಷ್ಯರಿಗೇ ಜಾಗವಿಲ್ಲದಂತಾಗಿದೆ. ವಿಶಾಲ ಹೃದಯಿಗಳಾದ ನೀವು (ಅರ್ಜಿದಾರರು) ಈ ನಾಯಿಗಳನ್ನು ನಿಮ್ಮ ಮನೆಯೊಳಗೆ ಕರೆದೊಯ್ದು ಯಾಕೆ ಆಹಾರ ಹಾಕಬಾರದು? ಅದನ್ನು ಯಾರೂ ತಡೆಯುವುದಿಲ್ಲವಲ್ಲ?’ ಎಂದು ಪ್ರಶ್ನಿಸಿದ್ದಾರೆ.

ಬೀದಿ ನಾಯಿಗಳ ಬಗ್ಗೆ ಅನುಕಂಪ ಇರಬೇಕು ಎಂಬುದರ ಬಗ್ಗೆ ಯಾರ ಭಿನ್ನಾಭಿಪ್ರಾಯವೂ ಇಲ್ಲ. ಆದರೆ, ಅವುಗಳ ಸಂಖ್ಯೆಯನ್ನು ವೈಜ್ಞಾನಿಕವಾಗಿ ನಿಯಂತ್ರಣ ಮಾಡದೇ, ಹೇಗೆಂದರೆ ಹಾಗೆ ಬೆಳೆಯಲು ಬಿಡಬೇಕೇ? ಅವು ಸಿಕ್ಕಸಿಕ್ಕವರಿಗೆ ಕಚ್ಚುವುದನ್ನು ನೋಡುತ್ತ ಸುಮ್ಮನಿರಬೇಕೇ? ಈ ಬಗ್ಗೆ ಗಂಭೀರ ಚಿಂತನೆ ಅಗತ್ಯ. ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಇದರ ಬಗ್ಗೆ ಯೋಚಿಸಿ ಸಮಸ್ಯೆ ಪರಿಹರಿಸಲು ಮುಂದಾಗಬೇಕು. ಸಂತ್ರಸ್ತರು ಮತ್ತು ಪ್ರಾಣಿದಯಾ ಸಂಸ್ಥೆಗಳ ಪದಾಧಿಕಾರಿಗಳ ಸಭೆ ಕರೆದು ಚರ್ಚಿಸಿ, ಸೂಕ್ತ ನಿರ್ಧಾರಕ್ಕೆ ಬರಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net