

ಬೆಂಗಳೂರು: ಎಲ್‌ಎಸ್‌ಡಿ (ಲೈಸರ್ಜಿಕ್ ಆ್ಯಸಿಡ್ ಡೈಥೈಲಾಮೈಡ್) ರೀತಿಯ ಮಾದಕ ವಸ್ತುವನ್ನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಅದರೊಂದಿಗಿರುವ ಬ್ಲಾಟರ್ ಪೇಪರ್‌ನ ತೂಕವನ್ನೂ ಪರಿಗಣಿಸಬೇಕಾಗುತ್ತದೆ ಎಂದು ಹೈಕೋರ್ಟ್ ಆದೇಶಿಸಿದೆ.
ಬೆಂಗಳೂರಿನ ನಿವಾಸಿ ಕಲಾಂ ನರೇಂದ್ರ ಅಲಿಯಾಸ್ ಪಾಂಡು ಎಂಬುವರು ತನ್ನ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಸ್ವೀಕರಿಸಿರುವ ಮಾದಕ ವಸ್ತು ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದು, ಅದನ್ನು ವಾಣಿಜ್ಯ ಬಳಕೆಗೆ ಪಡೆದುಕೊಳ್ಳದೆ ಸ್ವಂತ ಉದ್ದೇಶಕ್ಕಾಗಿ ಬಳಕೆಗಾಗಿ ಸ್ವೀಕರಿಸಿದ್ದರು. ಅದು ಅತ್ಯಂತ ಸಣ್ಣ ಪ್ರಮಾಣದಲ್ಲಿರುವುದರಿಂದ ಎನ್‌ಡಿಪಿಎಸ್ ಕಾಯ್ದೆ ಉಲ್ಲಂಘನೆ ಆಗುವುದಿಲ್ಲ ಎಂದು ವಾದ ಮಂಡಿಸಿದ್ದರು.
ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠ, ಹಲವು ಪ್ರಕರಣಗಳಲ್ಲಿ ಆಕ್ಷೇಪಾರ್ಹ ಮಾದಕ ವ್ಯಸ್ತುಗಳ ತೂಕವನ್ನು ಪರಿಗಣಿಸುವ ಸಂದರ್ಭದಲ್ಲಿ ಬ್ಲಾಟರ್ ಪೇಪರ್ ಅನ್ನು ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಹೀಗಾಗಿ ಬಾಟ್ಲರ್ ಪೇಪರ್ ಎಂಬುದು ಎಲ್‌ಎಸ್‌ಡಿಯೊಂದಿಗೆ ಇರಲಿದ್ದು, ಎರಡನ್ನೂ ಒಟ್ಟಾಗಿ ಸೇವನೆ ಮಾಡಲಿದ್ದಾರೆ ಎಂದು ನ್ಯಾಯಪೀಠ ಹೇಳಿದೆ.
ಬ್ಲಾಟರ್ ಪೇಪರ್ ಸೈಕೋಟ್ರೋಪಿಕ್ ವಸ್ತುವಾಗಿರುವ ಎಲ್‌ಎಸ್‌ಡಿಯ ಪರ್ಯಾಯ ರೂಪ. ಎಲ್‌ಎಸ್‌ಡಿಯೊಂದಿಗೆ ಬ್ಲಾಟರ್ ಪೇಪರ್ ಸೇವನೆ ಮಾಡುವುದರಿಂದ ಅದು ಸಹ ಮಾದಕ ವಸ್ತುವಿನೊಂದಿಗೆ ಪರಿಗಣಿಸಬೇಕು ಎಂದು ಪೀಠ ಹೇಳಿದೆ.
ಜತೆಗೆ, ಬ್ಲಾಟರ್ ಪೇಪರ್ ಜತೆ ಆಕ್ಷೇಪಾರ್ಹ ಔಷಧದ ತೂಕವನ್ನು ಪರಿಗಣಿಸಿದರೆ ಅದು 0.11 ಗ್ರಾಂ ತೂಗುತ್ತದೆ. ಇದು ವಾಣಿಜ್ಯ ಪ್ರಮಾಣವಾಗಿದೆ. ಆದ್ದರಿಂದ ಪ್ರತಿ ಬ್ಲಾಟರ್ ಪೇಪರ್‌ನಲ್ಲಿ ಸುಮಾರು 30ರಿಂದ 50 ಮೈಕ್ರೋಗ್ರಾಂಗಳಷ್ಟು ಸೈಕೋಟ್ರೋಪಿಕ್ ವಸ್ತುವಿರಬಹುದು ಮತ್ತು ಅದ್ದರಿಂದ ವಶಪಡಿಸಿಕೊಂಡ ಎಲ್.ಎಸ್.ಡಿ ಸಣ್ಣ ಪ್ರಮಾಣದಲ್ಲಿದೆ(2000 ಮೈಕ್ರೋಗ್ರಾಗಳವರೆಗೆ) ಮಾತ್ರ ಇತ್ತು ಎಂಬ ಅರ್ಜಿದಾರರ ವಾದವನ್ನು ನ್ಯಾಯಪೀಠ ತಿರಸ್ಕರಿಸಿದೆ.