ಕನಕಪುರದಲ್ಲಿ ಠೇವಣಿ ಕಳೆದುಕೊಂಡು ಹೀನಾಯವಾಗಿ ಸೋತ ಬಿಜೆಪಿ ಅಭ್ಯರ್ಥಿ ಈಗ ವಿಪಕ್ಷ ನಾಯಕ: ಕಾಂಗ್ರೆಸ್​ ವ್ಯಂಗ್ಯ

Ashoka (1)
Published on

ಬೆಂಗಳೂರು: ಕನಕಪುರದಲ್ಲಿ ಠೇವಣಿ ಕಳೆದುಕೊಂಡು ಹೀನಾಯವಾಗಿ ಸೋತಿರುವ ಬಿಜೆಪಿ ಅಭ್ಯರ್ಥಿ ಈಗ ವಿರೋಧ ಪಕ್ಷದ ನಾಯಕರಾಗಿದ್ದಾರೆ ಎಂದು ಆರ್. ಅಶೋಕ ನೇಮಕಕ್ಕೆ ರಾಜ್ಯ ಕಾಂಗ್ರೆಸ್ ವ್ಯಂಗ್ಯವಾಡಿದೆ.

ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕರ ಆಯ್ಕೆ ಎರಡೂ ವಿಚಾರವಾಗಿ ರಾಜ್ಯ ಬಿಜೆಪಿ ಕಳೆದ ಕೆಲವು ದಿನಗಳಿಂದ ತೀವ್ರ ವಾಗ್ದಾಳಿ ಎದುರಿಸಿದ್ದು, ಇತ್ತೀಚೆಗಷ್ಟೇ ರಾಜ್ಯಾಧ್ಯಕ್ಷರ ಆಯ್ಕೆ ಮಾಡಿದ ಬೆನ್ನಿಗೇ ಇದೀಗ ವಿಪಕ್ಷ ನಾಯಕರ ಆಯ್ಕೆ ಮಾಡಿದೆ. ಇಂದು ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಒಕ್ಕಲಿಗ ಸಮುದಾಯದ ಪ್ರಬಲ ನಾಯಕ ಆರ್​.ಅಶೋಕ​ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.​

ಇದರ ಬೆನ್ನಲ್ಲೇ ಎಕ್ಸ್​ (ಈ ಹಿಂದೆ ಟ್ವಿಟರ್​) ಖಾತೆಯಲ್ಲಿ ಪೋಸ್ಟ್​ ಮಾಡಿರುವ ಕಾಂಗ್ರೆಸ್​, ವಿರೋಧ ಪಕ್ಷದ ನಾಯಕನಾಗಲು ಬೇಕಿರುವ ಜ್ಞಾನ, ಅರ್ಹತೆ ಯಾವುದೂ ಇಲ್ಲದ ನಕಲಿ ಸಾಮ್ರಾಟನೇ ಕೊನೆಯ ಆಯ್ಕೆಯಾಗಿದ್ದು ಬಿಜೆಪಿ ನಾಯಕರ ಬರಗಾಲ ಎದುರಿಸುತ್ತಿರುವುದಕ್ಕೆ ನಿದರ್ಶನವಾಗಿದೆ ಎಂದು ಕುಹಕವಾಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಂತಹ ನಾಯಕರೆದುರು ತರಗೆಲೆಯಂತಹ ವ್ಯಕ್ತಿಯನ್ನು ಬಿಜೆಪಿ ತಂದು ಕೂರಿಸಿದೆ ಎಂದು ಆರ್​. ಅಶೋಕ ಆಯ್ಕೆಗೆ ಕಾಂಗ್ರೆಸ್​ ಲೇವಡಿ ಮಾಡಿದೆ.

ಜೆಡಿಎಸ್ ಪಕ್ಷದೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡಿದ್ದೇ ಬಿಜೆಪಿಯ ವಿರೋಧ ಪಕ್ಷದ ನಾಯಕನ ಆಯ್ಕೆಗೆ ಅರ್ಹತೆಯೇ? ಈ ಆಯ್ಕೆ ಕುಮಾರಸ್ವಾಮಿಯವರ ನಿರ್ದೇಶನದ ಮೇರೆಗೆ ಆಗಿದ್ದೋ, ಜೆಡಿಎಸ್ ಶಾಸಕರ ಅಭಿಪ್ರಾಯದ ಆಧಾರದಲ್ಲಿ ಆಗಿದ್ದೋ ಅಥವಾ ಬಿಜೆಪಿ ಶಾಸಕರ ಅಭಿಪ್ರಾಯದಿಂದ ಆಗಿದ್ದೋ ಎಂದು ಕಾಂಗ್ರೆಸ್​ ಬಿಜೆಪಿಯನ್ನು ಪ್ರಶ್ನೆ ಮಾಡಿದೆ.

ಅಂದಹಾಗೆ ರಾಜ್ಯ ವಿಧಾನಸಭೆ ಚುನಾವಣೆ ಮುಗಿದು ಆರು ತಿಂಗಳಾದ ಬಳಿಕ ಬಿಜೆಪಿ ತನ್ನ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕ ಇಬ್ಬರನ್ನೂ ಆಯ್ಕೆ ಮಾಡಿದೆ. ನವೆಂಬರ್​ 10ರಂದು ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕರಾಗಿ ನೇಮಕ ಮಾಡಲಾಯಿತು. ಇದಾದ ಒಂದು ವಾರದ ಬೆನ್ನಲ್ಲೇ ಆರ್​. ಅಶೋಕ ಅವರನ್ನು ವಿಪಕ್ಷ ನಾಯಕ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net