ಡಾ.ಅಂಬೇಡ್ಕರ್‌ಗೆ ಅಪಮಾನ ಹೆಸರಲ್ಲಿ ಕಾಂಗ್ರೆಸ್ ಪ್ರಾಯೋಜಿತ ಹೋರಾಟ: ಛಲವಾದಿ ಟೀಕೆ | Congress sponsored agitation

Chalavadi Narayana swamy
Published on

ಬೆಂಗಳೂರು: ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಮಾಡಿದ ಭಾಷಣವನ್ನು ಕಾಂಗ್ರೆಸ್‌ನವರು ತುಂಡರಿಸಿ, ತಮಗೆ ಬೇಕಾದಂತೆ ತಿರುಚಿ ಹಬ್ಬಿಸಿದ್ದಾರೆ. ಆ ಮೂಲಕ ಡಾ.ಬಿ.ಅರ್.ಅಂಬೇಡ್ಕರ್‌ಗೆ ಬಿಜೆಪಿ ಅಪಮಾನಿಸಿದೆ ಎಂದು ಬಿಂಬಿಸಿ ಕಾಂಗ್ರೆಸ್ ಪಕ್ಷದ ಪ್ರಾಯೋಜಿತ ಹೋರಾಟಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ  Chalavadi Narayanaswamy ಟೀಕಿಸಿದರು.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆಹರೂ ಅವರರಿಂದ ರಾಜೀವ್‌ಗಾಂಧಿವರೆಗೆ ಬಾಬಾಸಾಹೇಬ್‌ರಿಗೆ ಕಾಂಗ್ರೆಸ್‌ನವರು ಅವಮಾನಿಸಿದರು. ಬದುಕಿದ್ದಷ್ಟು ಕಾಲ ಡಾ.ಅಂಬೇಡ್ಕರ್ ಹಿಂಸೆ ನೀಡಿದರು, ಸತ್ತ ಮೇಲೆ ದೆಹಲಿಯಲ್ಲಿ ಸಮಾಧಿಗೆ ಒಂದಿಷ್ಟು ಜಾಗವನ್ನೂ ಕೊಡಲಿಲ್ಲ.

ಬಿಜೆಪಿ ಒಳಗೊಂಡ ಸಮ್ಮಿಶ್ರ ಸರ್ಕಾರದ ನೇತೃತ್ವವಹಿಸಿದ್ದ ವಿ.ಪಿ.ಸಿಂಗ್ ಅವರು ಡಾ.ಅಂಬೇಡ್ಕರ್‌ಗೆ ಭಾರತರತ್ನ ನೀಡಿ ಗೌರವಿಸಿದರು. ಆದರೆ ಗಾಂಧಿ ಹೆಸರಿನಲ್ಲಿ ಆಡಳಿತ ನಡೆಸಿದ ಕುಟುಂಬವು ತನಗೆ ತಾನೇ ಭಾರತರತ್ನ ಕೊಟ್ಟುಕೊಂಡಿತು ಎಂದು ಕಿಡಿಕಾರಿದರು.

ಖರ್ಗೆಗೆ ಸವಾಲು

ವಿಧಾನಸಭೆ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರು ಡಾ.ಅಂಬೇಡ್ಕರ್‌ಗೆ ಕಾಂಗ್ರೆಸ್ ಪಕ್ಷದಿಂದ ಸಾಕಷ್ಟು ಅಪಮಾನವಾಗಿದೆ ಎಂದು ಹೇಳಿದ್ದರು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಈ ಮಾತು ಒಪ್ಪುತ್ತಾರಾ ? ಇಲ್ಲವಾ ? ಎಂಬುದನ್ನು ಹೇಳಲಿ ಎಂದು ಸವಾಲೆಸೆದರು.

ಡಾ.ಅಂಬೇಡ್ಕರ್‌ಗೆ ನಿಜವಾದ ಗೌರವವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಲ್ಲಿಸುತ್ತಿದೆ. ಕಾಂಗ್ರೆಸ್‌ನವರಿಗೆ ಇದ್ದಕ್ಕಿದ್ದಂತೆ ಡಾ.ಅಂಬೇಡ್ಕರ್ ಪ್ರೀತಿ, ಗೌರವ ಶುರುವಾಗಿ ಬಿಟ್ಟಿದ್ದು, ಆ ದಿನಾಂಕ ಯಾವುದು ? ಕಾರಣವೇನು ? ಎಂದು ಹೇಳಿದರೆ ನಾವು ಬರೆದಿಟ್ಟುಕೊಳ್ಳುತ್ತೇವೆ ಎಂದು ಛಲವಾದಿ ನಾರಾಯಣಸ್ವಾಮಿ ಛೇಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net