ರಾಮಮಂದಿರ ವಿಚಾರದಲ್ಲಿ ಕಾಂಗ್ರೆಸ್ ಇಬ್ಭಾಗ : ಬೊಮ್ಮಾಯಿ ವ್ಯಂಗ್ಯ

Basavaraj Bommai
Published on

ಬೆಂಗಳೂರು: ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ಬಾಲರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ವಿಚಾರದಲ್ಲಿ ಕಾಂಗ್ರೆಸ್ ಇಬ್ಬಾಗವಾಗಿದ್ದು,  ಕಾಂಗ್ರೆಸ್  ಹೈಕಮಾಂಡ್ ಹೋಗುವುದಿಲ್ಲ ಎಂದು ಹೇಳಿದರೆ, ಉತ್ತರ ಭಾರತದ ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ‌. ಇದರಲ್ಲಿ ಕಾಂಗ್ರೆಸ್ ಇಬ್ಬಾಗವಾಗಿದೆ ಎಂದು ಮಾಜಿ ಸಿಎಂ  ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.

ಬಿಜೆಪಿ ಕಚೇರಿಯಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲು ಅಯೋಧ್ಯೆಗೆ ಹೋಗುವುದಿಲ್ಲ ಎಂದು ಹೇಳಿದ್ದರು. ಅವರಿಗೆ ಸಲಹೆಗಾರರು ಬಹಳ‌ಜನ ಇದ್ದಾರೆ. ಹೀಗಾಗಿ ರಾಮ ಮಂದಿರ ವಿಚಾರದಲ್ಲಿ ಅವರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ.

ಒಂದು ದಿನ ನಮ್ಮ ಊರಿನಲ್ಲೇ ರಾಮನ ಪೂಜಿಸುತ್ತೇವೆ  ಅಂತಾರೆ ಮತ್ತೊಮ್ಮೆ ರಾಮ ಮಂದಿರ ಉದ್ಘಾಟನೆಗೆ ಹೊಗುವುದಿಲ್ಲ ಎನ್ನುತ್ತಾರೆ. ಅದರಿಂದ ರಾಜಕೀಯವಾಗಿ ಕಷ್ಟವಾಗಲಿದೆ ಎಂದು ಇನ್ನೊಬ್ಬ ಸಲಹೆಗಾರರು ಹೇಳಿದಾಗ ಅಯೋಧ್ಯೆಗೆ ಹೋಗುವುದಾಗಿ ಹೇಳುತ್ತಾರೆ. ರಾಮಮಂದಿರ ಉದ್ಘಾಟನೆವರೆಗೂ ಇನ್ನೂ ಏನೇನು ಹೇಳುತ್ತಾರೊ ನೋಡಿ ಎಂದು ಕಾಲೆಳೆದರು.

ಉತ್ತರ ಭಾರತದ ಅನೇಕ ಕಾಂಗ್ರೆಸ್ ಶಾಸಕರು ಅಯೋಧ್ಯೆಗೆ ಹೊಗುವುದಾಗಿ ಹೇಳುತ್ತಾರೆ. ಸೋನಿಯಾ, ಖರ್ಗೆ ಹೋಗುವುದಿಲ್ಲ ಎಂದು ಹೇಳುತ್ತಾರೆ‌. ರಾಜ್ಯದ ನಾಯಕರು ಜನವರಿ 22 ರ ನಂತರ ಹೋಗುವುದಾಗಿ ಹೇಳುತ್ತಾರೆ. ನೆಂಟರ ಮೇಲೆ ಆಸೆ ಅಕ್ಕಿ ಮೇಲೆ ಪ್ರೀತಿ ಎನ್ನುವಂತಾಗಿದೆ ಅವರ ಕಥೆ‌. ಅಲ್ಪ ಸಂಖ್ಯಾತರ ಮತ ಕಳೆದುಕೊಳ್ಳಲು ಇಷ್ಟವಿಲ್ಲ, ಅದರಿಂದ ಹಿಂದುಗಳ ಮತ ಕಳೆದುಕೊಳ್ಳುತ್ತೇವೆ ಎಂದು ಭಯವಾಗಿದೆ. ಹೀಗಾಗಿ ಈಗ ರಾಮಮಂದಿರ ನೊಡಲು ಹೋಗುವುದಾಗಿ ಹೇಳುತ್ತಿದ್ದಾರೆ ಎಂದು ಬೊಮ್ಮಾಯಿ ಛೇಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net