

ಬೆಂಗಳೂರು: ದುಷ್ಕೃತ್ಯಗಳಲ್ಲಿ ಸಿಕ್ಕಿಬಿದ್ದಾಗ ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ಮಾಡುವುದು ಕಾಂಗ್ರೆಸ್‌ನ ಹಳೆಯ ತಂತ್ರ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳು ರಾಜ್ಯಪಾಲರು ಮುಂದಿವೆ. ಈ ಕಾರಣಕ್ಕೆ ಅವರ ಮೇಲೆ ಕಾಂಗ್ರೆಸ್ ನಾಯಕರು ಹರಿಹಾಯುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಲಹರ್‌ಸಿಂಗ್ ಸಿರೋಯ ಟೀಕಿಸಿದ್ದಾರೆ.
ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು, ತಪ್ಪು ಮಾಡಿ ಸಿಕ್ಕಿಬಿದ್ದಾಗ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಕಾಂಗ್ರೆಸ್ ದಾಳಿ ಮಾಡುತ್ತದೆ. ಇದೇ ತಂತ್ರಗಾರಿಕೆಗೆ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ ಹಲವು ನಾಯಕರು ಮೊರೆ ಹೋಗಿದ್ದಾರೆ.
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳನ್ನೆಲ್ಲ ಸಾಮಾಜಿಕ ಹೋರಾಟಗಾರರು, ಆರ್‌ಟಿಐ ಕಾರ್ಯಕರ್ತರು, ಪತ್ರಕರ್ತರು ಹೊರಗೆಳೆದು, ರಾಜ್ಯಪಾಲರ ಗಮನಕ್ಕೆ ತಂದಿದ್ದಾರೆಯೇ ಹೊರತು ರಾಜಕಾರಣಿಗಳಲ್ಲ ಎಂದಿದ್ದಾರೆ.
ಅಂತಹ ಪ್ರಕರಣಗಳಲ್ಲಿ ಮುಡಾ ಒಂದಾಗಿದೆ. ಮುಡಾದ ರೀತಿಯಲ್ಲಿ ಇನ್ನೂ ಪ್ರಕರಣಗಳು ಕೂಡ ರಾಜ್ಯಪಾಲರು ಹಾಗೂ ಹೈಕೋರ್ಟ್ ಮುಂದೆ ಬರಬಹುದು. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಹೆಚ್ಚೆಚ್ಚು ಅಪಪ್ರಚಾರಕ್ಕೆ ಇಳಿದರೆ ಅಚ್ಚರಿಯೇನಲ್ಲ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ತಮ್ಮ ಮೊದಲ ಅವಧಿಯಲ್ಲಿ ಲೋಕಾಯುಕ್ತ ಸಂಸ್ಥೆಗೆ ಬೀಗ ಹಾಕಿದರು. ಪಾರದರ್ಶಕತೆ, ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಅವರದ್ದೇ ಅಡಿಯಲ್ಲಿ ಎಸಿಬಿ ಸ್ಥಾಪಿಸಿದರು. ನ್ಯಾಯಾಲಯದ ನಿರ್ದೇಶನದ ಬಳಿಕ ಲೋಕಾಯುಕ್ತ ಮರು ಸ್ಥಾಪನೆಯಾಗಿದೆ.
ಅಧಿಕಾರದಲ್ಲಿರುವ ಕಾಂಗ್ರೆಸ್ ನಾಯಕರಿಗೆ ತಮ್ಮ ಕುರ್ಚಿ ಅಲುಗಾಡುತ್ತಿದೆ ಎನ್ನುವುದು ಗೊತ್ತಾದ ಕೂಡಲೇ ಸಾಂವಿಧಾನಿಕ ಸಂಸ್ಥೆಗಳನ್ನು ನಾಶ ಮಾಡಲು ಪ್ರಯತ್ನಿಸುತ್ತಾರೆ. ಇಂದಿರಾ ಗಾಂಧಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದು ನಿದರ್ಶನವೆಂದು ಲಹರ್ ಸಿಂಗ್ ಸಿರೋಯ ತಿವಿದಿದ್ದಾರೆ.