

ನವದೆಹಲಿ: ಕರೊನಾ ವೈರಸ್ ಸಾಂಕ್ರಾಮಿಕ ರೋಗದ ಹಾವಳಿ ಮಧ್ಯೆ ನೀಟ್ ಮತ್ತು ಜೆಇಇ ಮುಖ್ಯ ಪರೀಕ್ಷೆಗಳನ್ನು ನಡೆಸುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಕಾಂಗ್ರೆಸ್ ಪಕ್ಷ ಇಂದು ರಾಷ್ಟ್ರವ್ಯಾಪಿ ಪ್ರತಿಭಟನೆ ಹಮ್ಮಿಕೊಂಡಿದೆ.
"ಈ ವಿಷಮ ಸ್ಥಿತಿಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿ ಬಗ್ಗೆ ಚಿಂತಿಸದ ಕೇಂದ್ರದ ಈ ಕ್ರಮವನ್ನು ಸಂಘಟಿತವಾಗಿ ವಿರೋಧಿಸಲು, ಕಾಂಗ್ರೆಸ್ ಶುಕ್ರವಾರ ರಾಜ್ಯ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಕೇಂದ್ರ ಸರ್ಕಾರಿ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಗುರುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೋವಿಡ್ನ ಈ ವಿಷಮ ಸಮಯದಲ್ಲಿ ಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್ ವಿರೋಧಿಸುತ್ತಿದೆ, ಈಗ ಪಕ್ಷದ ಕಾರ್ಯಕರ್ತರು ಕೇಂದ್ರದ ನಿಷ್ಕಾಳಜಿ ಧೋರಣೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ.
ಬುಧವಾರ ನಡೆದ ಸಭೆಯಲ್ಲಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಜಂಟಿಯಾಗಿ ಸುಪ್ರೀಂ ಕೋರ್ಟ್‌ಗೆ ತೆರಳಿ ಜೆಇಇ, ನೀಟ್ ಪರೀಕ್ಷೆಯನ್ನು ಮುಂದೂಡಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿರುವುದಾಗಿ ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.
ಆದರೆ, ಬಿಜೆಪಿ ಪ್ರತಿಭಟನೆಗಳನ್ನು ರಾಜಕೀಯ ಪ್ರೇರಿತ ಎಂದು ಹೇಳಿದ್ದು, ಇದು ಪರೀಕ್ಷೆಗಳಿಗೆ ಸಿದ್ಧರಾದ ಲಕ್ಷಾಂತರ ವಿದ್ಯಾರ್ಥಿಗಳ ಉತ್ಸಾಹವನ್ನು ಕುಗ್ಗಿಸುತ್ತದೆ ಎಂದು ಹೇಳಿದೆ.
ಮುಂದಿನ ತಿಂಗಳು ಜೆಇಇ ಮತ್ತು ನೀಟ್ ನಡೆಸುವ ನಿರ್ಧಾರಕ್ಕೆ ಬೆಂಬಲ ಸೂಚಿಸಿ 100 ಕ್ಕೂ ಹೆಚ್ಚು ಶಿಕ್ಷಣ ತಜ್ಞರ ಗುಂಪು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ.
ಏತನ್ಮಧ್ಯೆ, ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಈಗಾಗಲೇ 17 ಲಕ್ಷ ಅಭ್ಯರ್ಥಿಗಳು ಜೆಇಇ ಮತ್ತು ನೀಟ್ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳು ಯಾವುದೇ ಸಂದರ್ಭದಲ್ಲಿ ಪರೀಕ್ಷೆಗಳು ನಡೆದರೂ ಬರೆಯಲು ಸಿದ್ಧ ಎಂಬುದನ್ನು ಇದು ತೋರಿಸುತ್ತದೆ ಎಂದಿದ್ದಾರೆ.
"ಕನಿಷ್ಠ ಎರಡು-ಮೂರು ವರ್ಷಗಳಿಂದ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಕಾರಣ, ಪರೀಕ್ಷೆಗಳನ್ನು ನಡೆಸಲು ಒಲವು ತೋರುವ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಇಮೇಲ್ ಸಂದೇಶಗಳು ನಮಗೆ ಬಂದಿವೆ. ಸಂಪೂರ್ಣ ಶೈಕ್ಷಣಿಕ ವರ್ಷವನ್ನು ವ್ಯರ್ಥ ಮಾಡಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಎರಡು ಬಾರಿ ಮುಂದೂಡಿಕೆಯ ನಂತರ ಪರೀಕ್ಷೆಯ ದಿನಾಂಕನ್ನು ಅಂತಿಮಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.