ಬೋಂಡಾ ತಯಾರಿಸಿ ಅಣಕಿಸಿದ ಕೈ ಪಡೆ: ತಾಲೂಕು ಕಚೇರಿ ಎದುರು ಯುವ ಕಾಂಗ್ರೆಸ್ ಪ್ರತಿಭಟನೆ

8-klr-1
Published on

ಕೋಲಾರ : ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕ, ತಾಲೂಕು ಯುವ ಕಾಂಗ್ರೆಸ್ ಕಾರ್ಯಕರ್ತರು ತಾಲೂಕು ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆಯನ್ನು ನಿರಂತರವಾಗಿ ಹೆಚ್ಚಿಸುವ ಮೂಲಕ ಸಾರ್ವಜನಿಕರ ಜನಜೀವನದ ಮೇಲೆ ಬರೆ ಎಳೆಯುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರೆ, ಮಹಿಳಾ ಘಟಕದ ಪದಾಧಿಕಾರಿಗಳು ಖಾಲಿ ಸಿಲಿಂಡರ್ ಪಕ್ಕಕ್ಕಿಟ್ಟು, ಒಲೆ ಸಿದ್ಧಪಡಿಸಿ ಸೌದೆ ಉರಿಯಲ್ಲಿ ಬಜ್ಜಿಬೋಂಡಾ ತಯಾರಿಸಿ ಬೆಲೆ ಏರಿಕೆಯನ್ನು ಅಣಕಿಸಿದರು.

ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕ ಅಧ್ಯಕ್ಷೆ ರತ್ನಮ್ಮ ಮಾತನಾಡಿ, ಅಡುಗೆ ಅನಿಲ, ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಗೃಹಿಣಿಯರಿಗೆ ಕುಟುಂಬದ ಆರ್ಥಿಕ ವೆಚ್ಚ ನಿರ್ವಹಿಸುವುದು ಕಷ್ಟವಾಗಿದೆ. ಬೆಲೆ ಇಳಿಸಲು ಕ್ರಮ ವಹಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಜಿಲ್ಲಾ ಕಿಸಾನ್ ಖೇತ್ ಅಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಮಾತನಾಡಿ, ದಿನಬಳಕೆ ವಸ್ತುಗಳ ಬೆಲೆ ಇಳಿಸುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ತಮ್ಮ ಅಗತ್ಯ ಪೂರೈಸಿಕೊಂಡು ಬಡವರನ್ನು ಕಷ್ಟಕ್ಕೆ ತಳ್ಳಿದೆ ಎಂದರು.

ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ನವೀನ್ ಮಾತನಾಡಿ, ಪ್ರಧಾನಿ ಮೋದಿ ನೋಟು ಅಮಾನ್ಯೀಕರಣ ಮಾಡಿದ ಸಂದರ್ಭದಲ್ಲಿ 2000 ರೂ. ನೋಟು ಚಲಾವಣೆಗೆ ತಂದಿದ್ದರು. ಆದರೆ ಇಂದು ಈ ನೋಟುಗಳು ಹೊರಗೆ ಬರುತ್ತಿಲ್ಲ, ಬದಲಾಗಿ ಬಿಜೆಪಿ ಖಜಾನೆ ಸೇರುತ್ತಿದೆ. ರಾಷ್ಟ್ರೀಯ ಹೆದ್ದಾರಿ ಖಾಸಗೀಕರಣಗೊಳಿಸಿ ಪ್ರತಿ 5ರಿಂದ 10 ಕಿಮೀಗೆ ಟೋಲ್ ಹಾಕಲು ಅನುಮತಿ ನೀಡಲು ಮುಂದಾಗಿದೆ ಎಂದರು.

ಬೇಡಿಕೆಗಳ ಮನವಿಯನ್ನು ಶಿರಸ್ತೇದಾರ್ ಕೋದಂಡಪ್ಪ ಅವರಿಗೆ ಸಲ್ಲಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕ ಅಧ್ಯಕ್ಷ ಕೆ.ಜಯದೇವ್, ಪ್ರಧಾನ ಕಾರ್ಯದರ್ಶಿ ಜಗನ್, ಕೋಲಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್‌ಬಾಬು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೆಂಕಟಪತೆಪ್ಪ, ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ನವೀನ್, ನಗರಸಭೆ ಮಾಜಿ ಸದಸ್ಯರಾದ ಲಾಲ್‌ಬಹದ್ದೂರ್ ಶಾಸ್ತ್ರಿ, ಪ್ಯಾರೇಜಾನ್, ಹಿಂದುಳಿದ ವರ್ಗಗಳ ಮುಖಂಡ ಬೆಳ್ಳಂಬರಿ ನಾಗರಾಜ್, ರಾಜೇಶ್ ಇತರರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net