ಸರ್ಕಾರದ ಹಣದಲ್ಲಿ ಕಾಂಗ್ರೆಸ್ ಪಕ್ಷದ ಸಮಾವೇಶ: ಆರ್.ಅಶೋಕ್ ಖಂಡನೆ | R Ashok condemns

R Ashok
Published on

ಬೆಂಗಳೂರು: ಸರ್ಕಾರದ ಹಣವನ್ನು ಬಳಸಿ ಬೆಳಗಾವಿಯಲ್ಲಿ ಕಾಂಗ್ರೆಸ್‌ ಸರ್ಕಾರ ತನ್ನ  ಪಕ್ಷದ ಸಮಾವೇಶವನ್ನು ಮಾಡುತ್ತಿರುವುದು ಖಂಡನೀಯ ಎಂದಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ R Ashok, ಇದರ ವಿರುದ್ಧ ವಿಧಾನಸೌಧದ ಗಾಂಧೀಜಿ ಮುಂಭಾಗ ಶುಕ್ರವಾರ ಪ್ರತಿಭಟಿಸಲಾಗುವುದು ಎಂದು ಹೇಳಿದರು.

ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಸ್ವಾತಂತ್ರ್ಯ ದೊರೆತ ನಂತರ ಕಾಂಗ್ರೆಸ್‌ ಪಕ್ಷವನ್ನು ವಿಸರ್ಜಿಸಿ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ನಕಲಿ ಗಾಂಧಿಗಳು ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸಿ ಈಗ ಬೆಳಗಾವಿಯಲ್ಲಿ ಸಮಾವೇಶ ಮಾಡುತ್ತಿದ್ದಾರೆ.

ಗಾಂಧೀಜಿ ಬಹಳ ಸರಳವಾಗಿದ್ದರು. ಆದರೆ ಕಾಂಗ್ರೆಸ್‌ ನಾಯಕರು ಆಡಂಬರದ ಬದುಕು ನಡೆಸುತ್ತಿದ್ದಾರೆ. ಪ್ರಧಾನಿ, ಗೃಹ ಸಚಿವರು, ಎಚ್‌.ಡಿ.ಕುಮಾರಸ್ವಾಮಿ, ಸಂಸದರು, ಯಾರನ್ನೂ ಆಹ್ವಾನಿಸದೆ ಕಾಂಗ್ರೆಸ್‌ ಪಕ್ಷದ ನಾಯಕರನ್ನು ಮಾತ್ರ ಸಮಾವೇಶಕ್ಕೆ ಆಹ್ವಾನಿಸಲಾಗಿದೆ. ಇದು ಸರ್ಕಾರಿ ಕಾರ್ಯಕ್ರಮವಲ್ಲ, ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮ ಎಂದು ದೂರಿದರು.

ಕಾಂಗ್ರೆಸ್‌ನವರು ಅಖಂಡ ಭಾರತವನ್ನು ಒಡೆದು ಹಾಕಿದ್ದರು. ನಾವು ಅಖಂಡ ಭಾರತದ ಚಿತ್ರ ತೋರಿಸಿದರೆ, ಕಾಂಗ್ರೆಸ್‌ನವರು ಜಮ್ಮು-ಕಾಶ್ಮೀರ ಇಲ್ಲದ ಭಾರತದ ಚಿತ್ರ ತೋರಿಸುತ್ತಿದ್ದಾರೆ. ಭಾರತದ ಭೂಪಟವನ್ನೇ ಛಿದ್ರ ಮಾಡಿರುವುದು ಖಂಡನೀಯ. ಕಾಂಗ್ರೆಸ್‌ ಇಡೀ ದೇಶವನ್ನು ಒಡೆಯುವ ಮನಸ್ಥಿತಿ ಹೊಂದಿದೆ ಎಂದರು.

ಅಂಬೇಡ್ಕರ್‌ರನ್ನು ಸೋಲಿಸಿದ ಕಾಂಗ್ರೆಸ್‌

ಬಾಬಾ ಸಾಹೇಬ್‌ ಅಂಬೇಡ್ಕರ್‌ ಎಂದೂ ಕಾಂಗ್ರೆಸ್‌ನ ನಾಯಕರಾಗಿರಲಿಲ್ಲ. ಅವರು ಕಾಂಗ್ರೆಸ್‌ ಪಕ್ಷವನ್ನು ವಿರೋಧಿಸಿ, ಸರ್ಕಾರದ ವಿರುದ್ಧ ನಿಂತಿದ್ದರು. ತಮ್ಮದೇ ಪಕ್ಷ ಆರಂಭಿಸಿ ಅಲ್ಲಿಂದಲೇ ಸ್ಪರ್ಧಿಸಿದ್ದರು.

ಅವರು ಚುನಾವಣೆಗೆ ನಿಂತಾಗ ಜವಾಹರಲಾಲ್‌ ನೆಹರೂ ಅವರ ವಿರುದ್ಧ ಪ್ರಚಾರ ಮಾಡಿ, ಅಂಬೇಡ್ಕರ್‌ ಸೋಲಿಸಿ ಎಂಬ ಸಂದೇಶ ನೀಡಿದ್ದರು. ಈಗ ಕಾಂಗ್ರೆಸ್‌ ನಾಯಕರು ಯಾವ ಮುಖ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ? ಎಂದು ಆರ್.ಅಶೋಕ್ ಪ್ರಶ್ನಿಸಿದರು.

ಜವಾಹರಲಾಲ್‌ ನೆಹರೂ ತಮಗೇ ತಾವೇ ಭಾರತರತ್ನ ಕೊಟ್ಟುಕೊಂಡರು. ಇನ್ನು ರಾಹುಲ್‌ ಗಾಂಧಿಗೆ ಮಾತ್ರ ಬಾಕಿ ಇದೆ. ಆದರೆ ಅಂಬೇಡ್ಕರರಿಗೆ ಯಾವುದೇ ಪ್ರಶಸ್ತಿ ನೀಡಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಡಾ.ಅಂಬೇಡ್ಕರರ ಜೀವನದ ಪ್ರಮುಖ ಸ್ಥಳಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಈಗ ಅಂಬೇಡ್ಕರ್‌ ಫೋಟೊವನ್ನು ಕಾಂಗ್ರೆಸ್ಸಿಗರು ಇಟ್ಟುಕೊಳ್ಳುತ್ತಾರೆ. ಆದರೆ ನೆಹರೂ ಅವರು ಅಂಬೇಡ್ಕರರನ್ನು ಎಂದೂ ಹೊಗಳಲಿಲ್ಲ. ಈಗ ಮತ ರಾಜಕಾರಣಕ್ಕಾಗಿ ಅಂಬೇಡ್ಕರ್‌ ಹೆಸರು ಬಳಸಿಕೊಳ್ಳಲಾಗುತ್ತಿದೆ ಎಂದು ಆರ್.ಅಶೋಕ್ ಕುಟುಕಿದರು.

ತಪ್ಪು ಹೇಳಿಕೆ ನೀಡಿಲ್ಲ

ಕಾಂಗ್ರೆಸ್‌ ನಾಯಕರು ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರನ್ನು ಸಚಿವ ಸಂಪುಟದಿಂದ ಕೈ ಬಿಟ್ಟಿದ್ದರು. ಅವರು ಮೃತರಾದಾಗ ಸಮಾಧಿಗೂ ಜಾಗ ನೀಡಿರಲಿಲ್ಲ. ಒಬ್ಬೇ ಒಬ್ಬ ಕಾಂಗ್ರೆಸ್‌ ನಾಯಕ ಅಂತ್ಯಸಂಸ್ಕಾರಕ್ಕೆ ಹಣ ನೀಡಿರಲಿಲ್ಲ. ನೆಹರು, ಇಂದಿರಾಗಾಂಧಿ, ರಾಜೀವ್‌ಗಾಂಧಿ ಸಮಾಧಿಗೆ ಸಾಕಷ್ಟು ಜಾಗ ನೀಡಲಾಗಿದೆ. ಕೇಂದ್ರ ಗೃಹಸಚಿವ ಅಮಿತ್‌ ಷಾ ಅವರು ಯಾವುದೇ ತಪ್ಪು ಹೇಳಿಕೆ ನೀಡಿಲ್ಲ ಎಂದರು.

ಶಾಸಕರಾದ ಸಿ.ಟಿ.ರವಿ, ಶಾಸಕ ಮುನಿರತ್ನ ಅವರ ಮೇಲಿನ ಹಲ್ಲೆ ನೋಡಿದರೆ, ರಾಜ್ಯದಲ್ಲಿ ಗೂಂಡಾ ಆಡಳಿತ ನಡೆಯುತ್ತಿದೆ ಎಂದರ್ಥ. ಕೋರ್ಟ್‌ನಲ್ಲಿ ತೀರ್ಮಾನವಾಗುವವರೆಗೆ ಯಾರೂ ಅಪರಾಧಿಯಲ್ಲ ಎಂದ ಆರ್.ಅಶೋಕ್, ಮೊಟ್ಟೆ ಎಸೆದ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net