ಅಂಬೇಡ್ಕರ್ ವಿರೋಧಿ ಕಾಂಗ್ರೆಸ್ ಪಕ್ಷ

7 CKM 1
ಚಿಕ್ಕಮಗಳೂರು ಕುವೆಂಪು ಕಲಾಮಂದಿರದಲ್ಲಿ ಬುಧವಾರ ಬಿಜೆಪಿಯಿಂದ ಆಯೋಜಿಸಲಾಗಿದ್ದ ಬಲವರ್ಧನೆಗಾಗಿ ಭೀಮ ಸಮಾವೇಶ ಕಾರ್ಯಕ್ರಮವನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್ ಉದ್ಘಾಟಿಸಿದರು. ಮಾಜಿ ಸಚಿವ ಸಿ.ಟಿ.ರವಿ, ಶಾಸಕ ಛಲವಾದಿ ನಾರಾಯಣ ಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಬಾಬಾ ಸಾಹೇಬ್ ಅಂಬೇಡ್ಕರ್ ವಿರೋಧಿಯಾಗಿರುವುದು ಕಾಂಗ್ರೆಸ್ ಪಕ್ಷವೋ ಅಥವಾ ಬಿಜೆಪಿಯೋ ಎಂಬುದನ್ನು ಪ್ರತಿಯೊಬ್ಬರೂ ಪರಾಮರ್ಷಿಸಬೇಕು. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು, ಅವರು ಮೃತಪಟ್ಟಾಗ ಜಾಗವನ್ನೂ ನೀಡದಿದ್ದುದ್ದು ಕಾಂಗ್ರೆಸ್. ಇದರಿಂದಲೇ ಯಾರು ಅಂಬೇಡ್ಕರ್ ವಿರೋಧಿ ಎಂಬುದು ತಿಳಿಯುತ್ತದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಬುಧವಾರ ಬಿಜೆಪಿಯಿಂದ ಆಯೋಜಿಸಲಾಗಿದ್ದ ಬಲವರ್ಧನೆಗಾಗಿ ಭೀಮ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ಬದುಕಿದ್ದಾಗಲೂ ಅವಮಾನಿಸಿದ್ದು, ಮೃತಪಟ್ಟ ಮೇಲೂ ಅಪಮಾನಿಸಿದ್ದು ಕಾಂಗ್ರೆಸ್ ಪಕ್ಷ ಎಂದು ಕಿಡಿಕಾರಿದರು.
ಬಿಜೆಪಿಯವರು ಸಂವಿಧಾನ ಬದಲಿಸುತ್ತಾರೆ ಎಂದು ಆರೋಪ ಮಾಡುತ್ತಾರೆ. ಇದು ಆರೋಪಕ್ಕಷ್ಟೇ ಸೀಮಿತ. ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಸಂಸತ್‌ಗೆ ಬಂದವರೇ ಸಂಸತ್ ಮೆಟ್ಟಿಲುಗಳಿಗೆ ನಮಸ್ಕರಿಸಿದ್ದರು. ಬಳಿಕ ಸಂಸತ್ ಒಳ ಪ್ರವೇಶಿಸಿದವರೇ ಸಂವಿಧಾನಕ್ಕೆ ನಮಸ್ಕರಿಸಿದ್ದರು. ಹೀಗಿರುವಾಗ ಸಂವಿಧಾನ ಬದಲಿಸುವ ಪ್ರಶ್ನೆ ಎಲ್ಲಿ ಉದ್ಭವಿಸುತ್ತದೆ ಎಂದು ಪ್ರಶ್ನಿಸಿದರು.
ನರೇಂದ್ರ ಮೋದಿ ಅವರು ಪ್ರಧಾನಿಯಾಗುವವರೆಗೆ ನವೆಂಬರ್ ೨೬ನ್ನು ಲಾ ಡೇ ಎಂದು ಆಚರಿಸಲಾಗುತ್ತಿತ್ತು. ಅದೇ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಅದನ್ನು ಸಂವಿಧಾನ ಗೌರವ ದಿನಾಚರಣೆ ಎಂದು ಬದಲಿಸಿದರು. ಹೀಗಿರುವಾಗ ಬಿಜೆಪಿ ಸಂವಿಧಾನಕ್ಕೆ ಎಷ್ಟು ಗೌರವ ನೀಡುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು. ಬಿಜೆಪಿ ದಲಿತರ ಮೀಸಲಾತಿ ಕಿತ್ತುಹಾಕುತ್ತದೆ ಎನ್ನುತ್ತಾರೆ. ಆದರೆ ವಾಸ್ತವವಾಗಿ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ. ೧೫ರಿಂದ ೧೭ಕ್ಕೆ ಹೆಚ್ಚಿಸಿದ್ದು ಬಿಜೆಪಿ ಎಂದು ಮಾಹಿತಿ ನೀಡಿದರು.
ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಪರಿಶಿಷ್ಟ ಜಾತಿಯವರು ಕರ್ನಾಟಕದಲ್ಲಿ ನಂಬರ್ ೧ ಸ್ಥಾನದಲ್ಲಿದ್ದಾರೆ. ಆದರೆ ಪರಿಸ್ಥಿತಿಯಲ್ಲಿ ಯಾವ ಸ್ಥಾನದಲ್ಲಿz್ದೆÃವೆ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕು. ಕಾಂಗ್ರೆಸ್ ಸರ್ಕಾರ ಕಾಂತರಾಜು ವರದಿ ಸಿದ್ಧಪಡಿಸಿತು. ಆದರೆ ಅದನ್ನು ಬಿಡುಗಡೆ ಮಾಡಲು ಮಾತ್ರ ಇದುವರೆಗೆ ಕ್ರಮಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಂಬೇಡ್ಕರ್ ಅಧಿಕಾರದಲ್ಲಿದ್ದರೂ ಕಾಂಗ್ರೆಸ್ ಪಕ್ಷದಿಂದ ಸಾಕಷ್ಟು ಹಿಂಸೆ ಅನುಭವಿಸಿದ್ದರು. ಇದರಿಂದ ನೊಂದ ಅಂಬೇಡ್ಕರ್ ಅವರೇ ಕಾಂಗ್ರೆಸ್ ದಲಿತರ ಸುಡುವ ಮನೆ ಎಂದು ಹೇಳಿದ್ದರು. ನಮ್ಮ ಜನರಿಗೆ ರಾಜಕೀಯ ಬೇಕು. ಆದರೆ ರಾಜಕೀಯವೇ ಜೀವನವಾಗಬಾರದು ಎಂದು ಸಲಹೆ ನೀಡಿದರು.
ಕಾರ್ಯಕ್ರಮವನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಬಿಜೆಪಿ ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷ ಕೆ.ಪಿ.ವೆಂಕಟೇಶ್ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ, ಪ್ರಮುಖರಾದ ಜೆ.ಡಿ.ಲೋಕೇಶ್, ವಾದಿರಾಜ್, ನರೇಂದ್ರ, ನರಸಿಂಹ, ಗೌಡನಹಳ್ಳಿ ಮಂಜುನಾಥ್, ಹಿರೇಮಗಳೂರು ಪುಟ್ಟಸ್ವಾಮಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net