ಜಿಬಿಎ ಗೆಲ್ಲಲು ‘ಕಾಂಗ್ರೆಸ್ ಪರಿವಾರ’ ರಚನೆ

GBA
Published on

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ಹೊಸ ನಗರ ಪಾಲಿಕೆ ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲುವ ಸಲುವಾಗಿ ವಾರ್ಡ್ ಮಟ್ಟದಲ್ಲಿ 50 ಮನೆಗಳ ಕಾಂಗ್ರೆಸ್ ಪರಿವಾರ ಸ್ಥಾಪಿಸಿ ಮತದಾರರ ಸಮಸ್ಯೆಗೆ ಸ್ಪಂದಿಸಲು ಮುಂದಾಗಿದೆ.

ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ಮೇರೆಗೆ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳು ಈಗಾಗಲೇ ಸಭೆಗಳನ್ನು ಶುರು ಮಾಡಿದ್ದಾರೆ. ವಿಧಾನಸಭಾ ಮಟ್ಟದ ಸಭೆ ಕರೆದು ಮತಗಟ್ಟೆ ಸಮಿತಿ, ಬ್ಲಾಕ್ ಸಮಿತಿ ರಚನೆ ಮಾಡಲಾಗುತ್ತಿದೆ. ಇದರೊಂದಿಗೆ ಪ್ರತಿಯೊಂದು ಬೂತ್‌ಗೆ ಮತಗಟ್ಟೆ ಸಹಾಯಕರ (ಬಿಎಲ್‌ಎ) ತಂಡ ರಚನೆ ಮಾಡಿ ಪಟ್ಟಿ ನೀಡಬೇಕು. ಈ ಬಿಎಲ್‌ಎಗಳ ತಂಡ ತಮ್ಮ ವ್ಯಾಪ್ತಿಯ ಮತಪಟ್ಟಿಯನ್ನು ತೆಗೆದುಕೊಂಡು ಪ್ರತಿಯೊಂದು ಮನೆಗೆ ಹೋಗಿ ಪರಿಶೀಲನೆ ನಡೆಸಬೇಕು. ಮತದಾರರ ಪಟ್ಟಿಯಲ್ಲಿ ಇರುವ ದೋಷಗಳನ್ನು ಗುರುತಿಸಿ ವರದಿ ಸಿದ್ದಪಡಿಸಬೇಕು.

ಮತ್ತೊಂದೆಡೆ ವಾರ್ಡ್ ಮಟ್ಟದಲ್ಲಿ 50 ಮನೆಗಳನ್ನು ಸೇರಿಸಿಕೊಂಡು ಕಾಂಗ್ರೆಸ್ ಪರಿವಾರ ಎಂದು ತಂಡ ರಚನೆ ಮಾಡಬೇಕು. ಅವರೊಂದಿಗೆ ಉಪಹಾರ, ಊಟ, ಚಹ ಕೂಟಗಳನ್ನು ಏರ್ಪಡಿಸಿ ಅವರೊಂದಿಗೆ ಸಮನ್ವಯತೆ ಸಾಧಿಸಬೇಕು. ಆ ಮೂಲಕ ಸ್ಥಳೀಯರ ಸಮಸ್ಯೆಗಳನ್ನು ಆಲಿಸಿ ಬಗೆಹರಸುವ ಕೆಲಸಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕೆಂದು ಸೂಚಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಕೈಗೊಂಡಿರುವ ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವ ಬಗ್ಗೆ ಪ್ರಚಾರ ಮಾಡಬೇಕು. ಇದಲ್ಲದೆ, ಬೆಂಗಳೂರು ನಗರದಲ್ಲಿ ಕೈಗೊಂಡಿರುವ ಪ್ರಮುಖ ಯೋಜನೆಗಳ ಕುರಿತು ಅವರಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಬೇಕು.

ಕೇಂದ್ರ ಬಿಜೆಪಿ ಸರ್ಕಾರದ 11 ವರ್ಷದ ಆಡಳಿತದಲ್ಲಿ ಬೆಲೆಯೇರಿಕೆ, ನಿರುದ್ಯೋಗದಿಂದ ಜನರು ಬಿಜೆಪಿ ಸರ್ಕಾರದಿಂದ ಭ್ರಮನಿರಸನರಾಗಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ರಾಜ್ಯ ಸರ್ಕಾರಕ್ಕೆ ಬರುವ ಅನುದಾನದಲ್ಲಿ ತಾರತಮ್ಯ ಮೂಲಕ ಮಲತಾಯಿ ಧೋರಣೆ, ಮೇಕೆದಾಟು, ಮಹದಾಯಿ ಯೋಜನೆಗಳ ಬಗ್ಗೆ ಕೇಂದ್ರ ಸರ್ಕಾರ ಚಕಾರ ಎತ್ತದೆ ಇರುವ ಬಗ್ಗೆ ಪ್ರಚಾರ ಮಾಡಬೇಕು. ಈ ಮೂಲಕ ಹೊಸ ಐದು ಪಾಲಿಕೆಗಳಲ್ಲೂ ಕಾಂಗ್ರೆಸ್ ಅಧಿಕಾರ ಹಿಡಿಯಬೇಕೆಂದು ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಉಸ್ತುವಾರಿಗಳು ಟಾರ್ಗೆಟ್ ನೀಡುತ್ತಿದ್ದಾರೆ.

ವಾರ್ಡ್ ವಿಂಗಡನೆ ಬ್ಲೂಪ್ರಿಂಟ್ :

ಜಿಬಿಎಯ ಐದು ಹೊಸ ನಗರ ಪಾಲಿಕೆಗಳ ಗಡಿ ಗುರುತು ಮಾಡುವ ಕಾರ್ಯ ನಡೆಯುತ್ತಿದೆ. ಈ ನಿಟ್ಟಿನಲ್ಲಿ ವಾರ್ಡ್ ಗಡಿ ಗುರುತು ಮಾಡುವುದರ ಬಗ್ಗೆ ಬ್ಲೂ ಪ್ರಿಂಟ್‌ನ್ನು ಪಕ್ಷದಿಂದ ಸಿದ್ದಪಡಿಸಬೇಕು. ಇದು ಸ್ಥಳೀಯವಾಗಿ ಪಕ್ಷಕ್ಕೆ ಅನುಕೂಲವಾಗುವಂತೆ ಇರಬೇಕೆಂದು ಸೂಚನೆ ನೀಡಲಾಗಿದೆ.

ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನೇ ಮುಂದಿಟ್ಟುಕೊಂಡು ಪಾಲಿಕೆಗಳ ಚುನಾವಣೆ ಎದುರಿಸುತ್ತೇವೆ. ಕೇಂದ್ರ ಸರ್ಕಾರದ ವೈಲ್ಯಗಳನ್ನು ಮನೆ ಮನೆಗೆ ತಲುಪಿಸುತ್ತೇವೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಸಕ್ರಿಯವಾಗಿದ್ದಾರೆ.

ಸಲೀಂ ಅಹ್ಮದ್- ವಿಧಾನ ಪರಿಷತ್ ಸರ್ಕಾರದ ಮುಖ್ಯ ಸಚೇತಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net