

ಬೆಂಗಳೂರು: ಇತ್ತೀಚೆಗೆ ರಾಜಭವನ ಕೇಂದ್ರಿತ ಚಟುವಟಿಕೆ ಬಿರುಸುಗೊಂಡಿದ್ದು, ರಾಜ್ಯಪಾಲರ ಅಭಿಪ್ರಾಯ, ನಡವಳಿಕೆ ಗಮನ ಸೆಳೆಯುತ್ತಿದೆ.
ಬಿಜೆಪಿ, ಜೆಡಿಎಸ್ ನಾಯಕರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಬೇಕೆಂದು ಸಚಿವರು, ಶಾಸಕರ ನಿಯೋಗ ರಾಜಭವನಕ್ಕೆ ತೆರಳಿದಾಗ ಆತಿಥ್ಯ ನೀಡಿ ಅಚ್ಚರಿಯ ಅಭಿಪ್ರಾಯ ವ್ಯಕ್ತಪಡಿಸಿ ಕಳಿಸಿದ್ದ ರಾಜ್ಯಪಾಲರು ಮಂಗಳವಾರ ಪರಿಷತ್ ಸದಸ್ಯರ ನಿಯೋಗದೊಂದಿಗೂ ಅದೇ ರೀತಿ ನಡೆದುಕೊಂಡಿದ್ದಾರೆ.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ ದೂರು ಕೊಡಲು ಹೋಗಿದ್ದ ಕೈ ನಾಯಕರು, ಹಳೆ ವಿಚಾರ ಕೆದಕಿದ್ದಾರೆ. ಪ್ರತಿಪಕ್ಷ ನಾಯಕರ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿಲ್ಲ ಎಂದು ಪ್ರಸ್ತಾಪಿಸಿದ್ದಾರೆ.
ಈ ವೇಳೆ, ತಮ್ಮ ನಿಲುವು ಸಮರ್ಥಿಸಿಕೊಂಡ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ನಡೆಯನ್ನು ಕಂಡು ಪರಿಷತ್ ಸದಸ್ಯರು ಅವಕ್ಕಾಗಿದ್ದಾರೆ.
ಜತೆಗೆ ಛಲವಾದಿ ನಾರಾಯಣಸ್ವಾಮಿ ಪ್ರಕರಣ ಸಂಬಂಧ ಪ್ರಶ್ನೆಗಳನ್ನು ಕೇಳಿ, ಕಳೆದ 2002-05ರಲ್ಲಿ ನಿಯಮ ಉಲ್ಲಂಘಿಸಿ ನಿವೇಶನ ಪಡೆದಿದ್ದಾರೆ ಎನ್ನುತ್ತೀರಿ
ಹಾಗಾದರೆ ಇಷ್ಟು ವರ್ಷ ಏನು ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದಾಗ ಕೈ ನಾಯಕರು ತಡಬಡಾಯಿಸಿದ್ದಾರೆ.
ಇಷ್ಟು ವರ್ಷಗಳಾದರೂ ಯಾಕೆ ದೂರು ಕೊಡಲಿಲ್ಲ, ಈಗ ಯಾಕೆ ಕ್ರಮಕೈಗೊಳ್ಳಿ ಅನ್ನುತ್ತಿದ್ದೀರಿ ಎಂದು ರಾಜ್ಯಪಾಲರು ಹೇಳಿದಾಗ, ಆಗಿನ ದಾಖಲೆಗಳು ನಮಗೆ ಈಗ ಸಿಕ್ಕಿವೆ ಹಾಗಾಗಿ ದೂರು ನೀಡಿದ್ದೇವೆ ಎಂದ ಕೈ ನಾಯಕರು ಸಮರ್ಥಿಸಿಕೊಂಡಿದ್ದಾರೆ.
ಬಳಿಕ ಗೃಹ ಮಂಡಳಿ ನಿರ್ದೇಶಕರಾಗಿ ಅಧಿಕಾರ ದುರುಪಯೋಗಪಡಿಸಿಕೊಂಡರು ಅನ್ನುತ್ತಿದ್ದೀರಿ,
ಮುಡಾ ಪ್ರಕರಣವೂ ಇದೇ ರೀತಿ ಇದೆ ಅಲ್ಲವೇ? ಎರಡೂ ಪ್ರಕರಣಗಳಿಗೂ ಹೋಲಿಕೆ ಇದೆ ಯಲ್ಲವೆೇ? ಆಗ ಛಲವಾದಿ ನಾರಾಯಣಸ್ವಾಮಿ ಗೃಹ ಮಂಡಳಿ ನಿರ್ದೇಶಕರಾಗಿದ್ದು ನಿಯಮ ಉಲ್ಲಂಘಿಸಿದರು, ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಸಿಎಂ ಪುತ್ರ ಯತೀಂದ್ರ ಕೂಡ ಸದಸ್ಯರಾಗಿದ್ದರು ಅಲ್ಲವೇ? ಮುಡಾ ಪ್ರಕರಣದಲ್ಲೂ ನಿಯಮ ಉಲ್ಲಂಘಿಸಿಯೇ ನಿವೇಶನ ಪಡೆದಿಲ್ಲವೇ ಎಂದು ಪ್ರಶ್ನಿಸಿದ್ದಾರೆನ್ನಲಾಗಿದೆ.
ಆದರೆ, ಮುಡಾ ಪ್ರಕರಣವೇ ಬೇರೆ ಛಲವಾದಿ ಪ್ರಕರಣವೇ ಬೇರೆ ಎಂದು ಕೈ ನಾಯಕರು, ಬೇಕಾದರೆ ದಾಖಲೆಗಳನ್ನ ನೋಡಿ ಎಂದ ಕೈ ನಾಯಕರು ಸಮಜಾಯಿಷಿ ನೀಡಲು ಮುಂದಾಗಿದ್ದಾರೆ. ಅಂತಿಮವಾಗಿ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವುದಾಗಿ ರಾಜ್ಯಪಾಲರು ಭರವಸೆ ನೀಡಿ ಕಳಿಸಿದ್ದಾರೆ.