

ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಯಾಕೋ ಎಲ್ಲವೂ ಸರಿ ಇಲ್ಲವೆಂಬಂತೆ ಭಾಸವಾಗುತ್ತಿದೆ. ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗು ಕೇಳಿ ಬರುತ್ತಿರುವ ನಡುವೆಯೇ ಹಿರಿಯ ಶಾಸಕ ಬಿ.ಆರ್. ಪಾಟೀಲ್ (BR Patil) ಸಿಎಂ ಸಿದ್ದರಾಮಯ್ಯರ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ಶಾಕ್ ನೀಡಿದ್ದಾರೆ.
ಈ ಹಿಂದೆ ಪತ್ರ ಬರೆಯುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದ ಆಳಂದ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಆರ್. ಪಾಟೀಲ್ಗೆ (BR Patil) ಸಿಎಂ ಸಿದ್ದರಾಮಯ್ಯರ ಸಲಹೆಗಾರ ಹುದ್ದೆ ನೀಡಿ ಸಮಾಧಾನಪಡಿಸಲಾಗಿತ್ತು. ಇದೀಗ ಈ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ಹಿರಿಯ ಶಾಸಕ ಬಿ.ಆರ್. ಪಾಟೀಲ್ ರಾಜ್ಯ ಕೈ ನಾಯಕರಿಗೆ ಶಾಕ್ ನೀಡಿದ್ದಾರೆ.
ಕೆಲ ತಿಂಗಳ ಹಿಂದೆ ಕಲಬುರಗಿಯಲ್ಲಿ ನಡೆದಿದ್ದ ಕ್ಯಾಬಿನೆಟ್ ಸಭೆ ಬಗ್ಗೆ ಅಸಮಾಧಾನ ಹೊರಹಾಕಿದ್ದ ಬಿ.ಆರ್. ಪಾಟೀಲ್ ತಮಗೆ ನೀಡಿರುವ ಸ್ಥಾನಮಾನ ಹಾಗೂ ಕ್ಷೇತ್ರಕ್ಕೆ ಅನುದಾನ ನೀಡದಿರುವ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದರು. ಇದೀಗ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ಸ್ವಪಕ್ಷದ ಸರ್ಕಾರದ ವಿರುದ್ಧ ಮತ್ತೊಮ್ಮೆ ಗುಡುಗಿದ್ದಾರೆ.
ಮುಖ್ಯಮಂತ್ರಿಯವರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವುದಾಗಿ ಸ್ವತಃ ಬಿ.ಆರ್.ಪಾಟೀಲ್ ಮಾಹಿತಿ ನೀಡಿದ್ದು, ರಾಜ್ಯ ಸರಕಾರ ನೀಡಿರುವ ಸಚಿವ ದರ್ಜೆ ಸ್ಥಾನಮಾನವು ಸೇರಿದಂತೆ ಎಲ್ಲ ಸೌಲಭ್ಯಗಳನ್ನ ಹಿಂದಿರುಗಿಸಿರುವುದಾಗಿಯೂ ಪ್ರಕಟಿಸಿದ್ದಾರೆ. ಆದರೆ, ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬುದರ ಕಾರಣವನ್ನು ತಿಳಿಸಿಲ್ಲ.