ಕಾಂಗ್ರೆಸ್‌ ಮುಖಂಡ ಶ್ರೀನಿವಾಸನ್ ಕೊಲೆ

srinivasan
ಶ್ರೀನಿವಾಸನ್
Published on

ಕೋಲಾರ:  ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ (ಕೌನ್ಸಿಲರ್ ಸೀನಪ್ಪ) ಅವರನ್ನು ದುಷ್ಕರ್ಮಿಗಳು ಸೋಮವಾರ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೊಗಳಗೆರೆ ಸಮೀಪ ಶ್ರೀನಿವಾಸನ್(62) ಬಾರ್ ಅಂಡ್ ರೆಸ್ಟೋರೆಂಟ್ ನಿರ್ಮಾಣ ಮಾಡಿಸುತ್ತಿದ್ದು, ಕಟ್ಟಡ ಕಾಮಗಾರಿ ವೀಕ್ಷಣೆಗೆ ಸೋಮವಾರ ಹೋಗಿದ್ದಾರೆ. ಆ ಸಂದರ್ಭದಲ್ಲಿ ಪರಿಚಿತರಂತೆ ಶ್ರೀನಿವಾಸನ್‌ ಅವರನ್ನು ಮಾತನಾಡಿಸಲು ಬಂದ ಗುಂಪೊಂದು ಮುಖಕ್ಕೆ ಸ್ಪ್ರೇ ಸಿಂಪಡಿಸಿ ಮಚ್ಚು ಮತ್ತು ಲಾಂಗ್ ಗಳಿಂದ ಹಲವಾರು ಬಾರಿ ತಿವಿದಿದ್ದಾರೆ.
ತೀವ್ರ ಗಾಯಗೊಂಡು ಕುಸಿದುಬಿದ್ದ ಅವರನ್ನು ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ನಂತರ ಕೋಲಾರದ ಜಾಲಪ್ಪ ಆಸ್ಪತ್ರೆಗೆ ಕರೆ ತಂದಿದ್ದಾರೆ. ಅಲ್ಲಿ ಅವರ ಸಾವನ್ನು ದೃಢಪಡಿಸಲಾಗಿದೆ.

ಕಾಂಗ್ರೆಸ್ ಮುಖಂಡರಾಗಿದ್ದ ಅವರು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಮಾಜಿ ಸಚಿವ ಕೆ.ಆರ್.ರಮೇಶ್ ಕುಮಾರ್ ಆಪ್ತರಾಗಿದ್ದರು.
ಶ್ರೀನಿವಾಸನ್ ಜೆಡಿಎಸ್ ಪಕ್ಷದಿಂದ ತಾಲ್ಲೂಕಿನ ಗೌನಪಲ್ಲಿ ಕ್ಷೇತ್ರದಿಂದ 2009ರಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದರು. ಅವರು ಐದು ವರ್ಷದ ಹಿಂದೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಪುರಸಭೆ ಸದಸ್ಯ, ಎಪಿಎಂಸಿ ಅಧ್ಯಕ್ಷರೂ ಆಗಿದ್ದರು. ಆಸ್ಪತ್ರೆಗೆ ಧಾವಿಸಿ ಬಂದ ರಮೇಶ್ ಕುಮಾರ್ ತಮ್ಮ ಆಪ್ತನನ್ನು ನೆನೆದು ಕಣ್ಣೀರಿಟ್ಟರು. ರಾಜಕೀಯ ವೈಷಮ್ಯ ಹಾಗೂ ಆಸ್ತಿ ವಿವಾದ ಹತ್ಯೆಗೆ ಕಾರಣ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಶ್ವಾನ ದಳ ಕರೆಸಿ ಪರಿಶೀಲಿಸಲಾಯಿತು. ಮಾರಕಾಸ್ತ್ರ ತುಂಬಿಕೊಂಡು ಬಂದಿದ್ದ ಚೀಲ ಪತ್ತೆಯಾಗಿದೆ. ಮುಖಕ್ಕೆ ಪೆಪ್ಪರ್‌ ಸ್ಪ್ರೇ ಮಾಡಿ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಹಾಗೂ ಶ್ರೀನಿವಾಸಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಗಳ ಪತ್ತೆಗೆ ಡಿವೈಎಸ್ಪಿ ನೇತೃತ್ವದಲ್ಲಿ ನಾಲ್ಕು ತಂಡ ರಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net