ಸಮಾಜವನ್ನು ಒಡೆಯುತ್ತ ಕಾಂಗ್ರೆಸ್ಸೇ ಒಡೆದು ಹೋಗಿದೆ: ಪ್ರಬುದ್ಧರ ಸಂವಾದದಲ್ಲಿ ನಡ್ಡಾ ಅಭಿಮತ

JP Nadda
Published on

ಹುಬ್ಬಳ್ಳಿ: ಸಮಾಜವನ್ನು ಒಡೆಯುತ್ತ ಕಾಂಗ್ರೆಸ್​ ಪಕ್ಷವೇ ಒಡೆದುಹೋಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅಭಿಪ್ರಾಯಪಟ್ಟಿದ್ದಾರೆ. ಹುಬ್ಬಳ್ಳಿಯ ಖಾಸಗಿ ಕಾಲೇಜಿನಲ್ಲಿ ನಡೆಯುತ್ತಿರುವ ಪ್ರಬುದ್ಧರ ಜತೆ ಸಂವಾದದಲ್ಲಿ ಅವರು ಈ ಮಾತನ್ನು ಹೇಳಿದರು.

ಕಾಂಗ್ರೆಸ್‌ ಎಪ್ಪತ್ತು ವರ್ಷದಲ್ಲಿ ಸಮಾಜವನ್ನು ಒಡೆದಿದೆ. ಸಮಾಜ ಒಡೆಯುತ್ತ ಒಡೆಯುತ್ತ ಕಾಂಗ್ರೆಸ್ ಸ್ವತಃ ಒಡೆದು ಹೋಗಿದೆ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಆಗಿರುವಂತೆ ಕಾಂಗ್ರೆಸ್​ನವರು ಕರ್ನಾಟಕದಲ್ಲೂ ವಿಭಜನೆಯಾಗಿದ್ದಾರೆ ಎಂದು ನಡ್ಡಾ ಹೇಳಿದರು.

ಆದರೆ ಮೋದಿಯವರು ಪ್ರಧಾನಿ ಆದ ಮೇಲೆ ಭಾರತದ ರಾಜಕೀಯ ಸಂಸ್ಕೃತಿ ಬದಲಿಸಿದ್ದಾರೆ. ಪ್ರಧಾನಿಯವರು ಎಲ್ಲರನ್ನೂ ಒಗ್ಗಟ್ಟಾಗಿ, ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಮೋದಿಯವರ ನೇತೃತ್ವದಲ್ಲಿ ದೇಶ ಒಂದು ದೀರ್ಘ ನೆಗೆತ ಕಂಡಿದೆ. ಬಡವರು, ಆದಿವಾಸಿಗಳಿಗೆ ಪದ್ಮ ಪ್ರಶಸ್ತಿ ಸಿಗುತ್ತಿದೆ. ಭಾರತ ಆರ್ಥಿಕವಾಗಿ ಸ್ಥಿರತೆಯಿಂದ ಬೆಳವಣಿಗೆ ಕಾಣುತ್ತಿದೆ ಎಂದು ಹೇಳಿದರು.

ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಪ್ರಧಾನಿಯವರು ಹಣದುಬ್ಬರವನ್ನು ನಿಯಂತ್ರಿಸಿದ್ದಾರೆ. ದೇಶದಲ್ಲಿ ಕಡುಬಡವರ ಸಂಖ್ಯೆ ಈಗ ಶೇಕಡ ಒಂದಕ್ಕಿಂತಲೂ ಕಡಿಮೆ ಇದೆ. ಜಗತ್ತಿನಲ್ಲಿಯೇ ಅತಿ ಕಡಿಮೆ ದರದ ಔಷಧ ಉತ್ಪಾದನೆಯನ್ನು ನಮ್ಮ ದೇಶ ಮಾಡುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ‌ ಸುಧಾರಣೆಯಿಂದ ದೊಡ್ಡಮಟ್ಟದ ಬದಲಾವಣೆ ಆಗುತ್ತಿದೆ. ದೇಶದ ಜನತೆಗೆ ಕೋವಿಡ್ ಲಸಿಕೆ ವಿತರಿಸುವ‌ ಮೂಲಕ ಕೋವಿಡ್ ನಿಯಂತ್ರಣದಲ್ಲಿ ಮೋದಿ ಕ್ರಾಂತಿ ಮಾಡಿದ್ದಾರೆ ಎಂದಿದ್ದಾರೆ.

ಈಗ ಬೇಡುವ ಭಾರತವಿಲ್ಲ, ಕೊಡುವ ಭಾರತವಿದೆ. ಉಚಿತ ಕೊಡುಗೆಗೂ, ಸಬಲೀಕರಣಕ್ಕೂ ವ್ಯತ್ಯಾಸವಿದೆ. ನಾವು ಜನರ ಸಬಲೀಕರಣಕ್ಕೆ ಹಲವಾರು ಯೋಜನೆಗಳನ್ನು ತಂದಿದ್ದೇವೆ. ಆರೋಗ್ಯ, ಶಿಕ್ಷಣ, ಸಾರಿಗೆ ಸಂಪರ್ಕ ಕ್ಷೇತ್ರದಲ್ಲಿ ಹಿಂದೆಂದೂ ಕಾಣದ ಬದಲಾವಣೆಯಾಗಿದೆ. ಡಬಲ್ ಇಂಜಿನ್ ಸರ್ಕಾರದ ಕಾರಣ ಕರ್ನಾಟಕ ದೇಶದಲ್ಲಿಯೇ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ ಎಂದರು.

ಹುಬ್ಬಳ್ಳಿಯ ವಿದ್ಯಾನಗರದಲ್ಲಿ ನಡೆಯುತ್ತಿರುವ ಈ ಪ್ರಬುದ್ಧರ ಸಂವಾದದಲ್ಲಿ ಸಂಘ-ಸಂಸ್ಥೆಗಳವರು, ಉದ್ಯಮಿಗಳು, ಶಿಕ್ಷಕ ಸಂಘಟನೆಗಳವರು ಮತ್ತು ಯುವಕರು ಭಾಗಿಯಾಗಿದ್ದಾರೆ. ನಡ್ಡಾ ಜತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡ ಉಪಸ್ಥಿತರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net