

ಬೆಂಗಳೂರು: ಭ್ರಷ್ಟಾಚಾರದ ಸರದಾರ ಎಂದರೆ ಕಾಂಗ್ರೆಸ್ ಪಕ್ಷ ಎನ್ನುವುದು ಜಗಜ್ಜಾಹೀರಾಗಿದ್ದು, ಅಧಿಕಾರಕ್ಕೆ ಬಂದ ಒಂದೂವರೆ ವರ್ಷದಲ್ಲಿ ಸರಣಿ ಹಗರಣಗಳು ಹೊರಬಿದ್ದಿವೆ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆ ಎಂದು ಅಧಿಕಾರದ ಗದ್ದುಗೆ ಏರಿದ ಕಾಂಗ್ರೆಸ್‌ನ ನಿಜಬಣ್ಣ ಬಯಲಾಗಿದೆ ಎಂದು ಬಿಜೆಪಿಯ ಮಾಜಿ ಸಚಿವ ಬಿ.ಸಿ.ಪಾಟೀಲ್ ಟೀಕಿಸಿದರು.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಗ್ಯಾರಂಟಿಗಳನ್ನು ನಿಭಾಯಿಸಲು ಏದುಸಿರು ಬಿಡುತ್ತಿದ್ದು, ಹೊರೆ ತಗ್ಗಿಸಿಕೊಳ್ಳಲು ಮಾರ್ಗಪಾಯ ಹುಡುಕುತ್ತಿದೆ. ಅನರ್ಹರ ನೆಪದಲ್ಲಿ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುತ್ತಿದ್ದು, ಹಣಕಾಸಿನ ತೊಂದರೆ ಬಹಿರಂಗವಾಗಿದೆ ಎಂದರು.
ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲವೆಂದು ಕಾಂಗ್ರೆಸ್ ಶಾಸಕರು ಮುನಿದಿದ್ದಾರೆ. ಈ ವಿಷಯ ಮರೆಮಾಚಲು ಶಾಸಕರಿಗೆ ಆರ್ ಎನ್ನುತ್ತಿದ್ದು, ಶಾಸಕರಿಗೆ 100 ಕೋಟಿ ರೂ ಆಮಿಷವೆಂಬ ಶಾಸಕ ರವಿಗಾಣಿಗ ಹೇಳಿಕೆಯು ಅವರ ಪಕ್ಷದ ಶಾಸಕರ ಮೇಲೆ ಅವರಿಗೇ ನಂಬಿಕೆಯಿಲ್ಲ ಎಂಬುದು ತೋರಿಸುತ್ತದೆ ಎಂದು ಬಿ.ಸಿ.ಪಾಟೀಲ್ ವಾಗ್ದಾಳಿ ಮಾಡಿದರು.
ಯಾರೂ ಕೂಡ ಪಕ್ಷಕ್ಕೆ ಅನಿವಾರ್ಯ ಅಲ್ಲ. ಪಕ್ಷದ ವಿರುದ್ಧ ಯಾರೂ ಮಾತಬಾಡಬಾರದು. ಪಕ್ಷದಿಂದ ವಕ್ಫ್ ಅನ್ಯಾಯದ ವಿರುದ್ಧ ಹೋರಾಟ ಮಾಡಲು ನಿರ್ಧರಿಸಲಾಗಿದೆ. ಅದರ ಪ್ರಕಾರ ನಾವೆಲ್ಲಾ ಹೋಗಬೇಕು ಕೆಲವರು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಆ ವಿಚಾರದಲ್ಲಿ ದೆಹಲಿ ನಾಯಕರ ಭೇಟಿ ಮಾಡುತ್ತೇವೆ ಎಂದರು.
ಜಿಲ್ಲಾವಾರು ಪ್ರವಾಸ ಮಾಡಿ ನೈಜ ವರದಿ ಸಿದ್ಧಪಡಿಸಲು ಪಕ್ಷದ ರಾಜ್ಯ ನಾಯಕರ ಮೂರು ತಂಡಗಳನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಚಿಸಿದ್ದು, ಮೂರು ತಂಡಗಳಲ್ಲಿ ಎಲ್ಲರೂ ಇದ್ದಾರೆ ಎಂದು ಬಿ.ಸಿ.ಪಾಟೀಲ್ ಸಮರ್ಥಿಸಿಕೊಂಡರು.