ಸಿಎಂ ರೇಸ್‌ನಲ್ಲಿದ್ದಾರೆ 10 ಜನ ;ಕಾಂಗ್ರೆಸ್‌ಗೆ ಅಧಿಕಾರ ಖಚಿತ ;ಶಾಸಕ ಡಾ.ಜಿ.ಪರಮೇಶ್ವರ ವಿಶ್ವಾಸ

ಮಧುಗಿರಿ ತಾಲೂಕಿನ ಪುರವರ ಹೋಬಳಿ ಹನುಮಂತಪುರದಲ್ಲಿ ಅಭಿಮಾನಿಗಳು ಶಾಸಕ ಡಾ.ಜಿ.ಪರಮೇಶ್ವರ ಅವರಿಗೆ ಬೃಹತ್ ಸೇಬಿನ ಹಾರ ಹಾಕಿ ಸನ್ಮಾನಿಸಿದರು.
ಮಧುಗಿರಿ ತಾಲೂಕಿನ ಪುರವರ ಹೋಬಳಿ ಹನುಮಂತಪುರದಲ್ಲಿ ಅಭಿಮಾನಿಗಳು ಶಾಸಕ ಡಾ.ಜಿ.ಪರಮೇಶ್ವರ ಅವರಿಗೆ ಬೃಹತ್ ಸೇಬಿನ ಹಾರ ಹಾಕಿ ಸನ್ಮಾನಿಸಿದರು.
Published on

ಮಧುಗಿರಿ: ಈ ಬಾರಿ ಶೇ.100 ಕಾಂಗ್ರೆಸ್ ಸರ್ಕಾರ ಅಧಿಕಾರ ಚುಕ್ಕಾಣಿ ಹಿಡಿಯಲಿದ್ದು, ಪಕ್ಷದಲ್ಲಿ 10 ಜನ ಸಿಎಂ ರೇಸ್‌ನಲ್ಲಿದ್ದಾರೆ. ಅದರಲ್ಲಿ ನಾನೂ ಒಬ್ಬ ಎಂದು ಮಾಜಿ ಡಿಸಿಎಂ, ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.

ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪುರವರ ಹೋಬಳಿ ಹನುಮಂತಪುರದಲ್ಲಿ ಬುಧವಾರ ಡಾ.ಜಿ.ಪರಮೇಶ್ವರ ಅವರ 5 ವರ್ಷದ ಸಾಧನೆಗಳ ಹೆಜ್ಜೆ ಗುರುತು ಪುಸ್ತಕವನ್ನು ಪ್ರತಿ ಮನೆಗೆ ತಲುಪಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ಗುರಿ ಮೊದಲು ಪಕ್ಷವನ್ನು ಅಧಿಕಾರಕ್ಕೆ ತರುವುದಾಗಿದೆ. ನಂತರ ಸಿಎಂ ಯಾರಾಗಬೇಕು ಎಂಬುದನ್ನು ಅಂತಿಮವಾಗಿ ಹೈಕಮಾಂಡ್ ತೀರ್ಮಾನಿಸಲಿದೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆಗಳನ್ನು ನೀಡುತ್ತಿದ್ದು, ಬಜೆಟ್ ಸಂದರ್ಭದಲ್ಲಿ ಯಾವುದೇ ಘೋಷಣೆ ಮಾಡುವಂತಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಬಜೆಟ್ ಸಮಯದಲ್ಲಿ ಘೋಷಣೆಗಳನ್ನು ಮಾಡದೆ ಬಜೆಟ್‌ನಲ್ಲಿ ಯೋಜನೆಗಳನ್ನು ಸೇರಿಸಿ ಅದಕ್ಕೆ ಹಣ ಬಿಡುಗಡೆ ಮಾಡಬೇಕು. ಆದರೆ ಬಿಜೆಪಿ ಸರ್ಕಾರ ಇದ್ಯಾವುದನ್ನೂ ಮಾಡದೆ ವೋಟಿಗಾಗಿ ಜನರನ್ನು ದಿಕ್ಕು ತಪ್ಪಿಸುತ್ತಿದೆ ಎಂದರು.

ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಸ್ಕ್ರೀನಿಂಗ್ ಕಮಿಟಿಯಲ್ಲಿ ಈ ತಿಂಗಳ ಒಳಗಾಗಿ ಅಂತಿಮ ಪಟ್ಟಿ ಪ್ರಕಟವಾಗಲಿದ್ದು, ನಾನೂ ಸಹ ಸ್ಕ್ರೀನಿಂಗ್ ಕಮಿಟಿ ಸದಸ್ಯನಾಗಿದ್ದೇನೆ ಎಂದು ಹೇಳಿದರು.

ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರ ರವಿಕುಮಾರ್, ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ಬೈರಪ್ಪ, ಗ್ರಾಪಂ ಅಧ್ಯಕ್ಷೆ ಗಂಗರತ್ನಮ್ಮ ಬೈರಪ್ಪ, ಮುಖಂಡರಾದ ಕೊಂಡವಾಡಿ ರಾಜಕುಮಾರ್, ಎಂ.ಜಿ.ಶ್ರೀನಿವಾಸಮೂರ್ತಿ, ಬಡಚೌಡನಹಳ್ಳಿ ಶಿವಕುಮಾರ್, ದೊಡ್ಡ ಹೊಸಹಳ್ಳಿ ಗ್ರಾಪಂ ಸದಸ್ಯ ನರಸಿಂಹಮೂರ್ತಿ, ವಾಲೆ ಚಂದ್ರಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥನಾರಾಯಣ, ಅರಕೆರೆ ಶಂಕರ್ ಇದ್ದರು.

ಬಡವರ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ: ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ 2500 ಕೋಟಿ ರೂಪಾಯಿ ಅಭಿವೃದ್ಧಿ ಕೆಲಸ ಮಾಡಿದ್ದು, ಈ ಪೈಕಿ ಶಾಲೆ, ಅಂಗನವಾಡಿ, ಆಸ್ಪತ್ರೆ, ರಸ್ತೆ, ಸಿಸಿ ರಸ್ತೆ, ಚರಂಡಿ, ದೇಗುಲಗಳು ಒಳಗೊಂಡಿವೆ. ಕ್ಷೇತ್ರದಲ್ಲಿ ಈವರೆಗೆ 20 ಸಾವಿರಕ್ಕೂ ಅಧಿಕ ಮನೆಗಳನ್ನು ಕಟ್ಟಲಾಗಿದೆ. ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿ ಬಡವರು, ಕೃಷಿಕರು ಹಾಗೂ ಕೂಲಿ ಕಾರ್ಮಿಕರು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ 7 ಕೆಜಿ ಅಕ್ಕಿ ನೀಡುತ್ತಿತ್ತು, ಆದರೆ ಬಿಜೆಪಿ ಸರ್ಕಾರ ಅಕ್ಕಿಯನ್ನು 5 ಕೆಜಿಗೆ ಇಳಿಸಿ ಬಡವರ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಲು ಮುಂದಾಗಿದೆ. ಗ್ಯಾಸ್ ಬೆಲೆ ಮತ್ತು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ ಎಂದು ಶಾಸಕ ಪರಮೇಶ್ವರ ದೂರಿದರು.

ಜೆಡಿಎಸ್‌ನವರು 123 ಸ್ಥಾನ ಗೆಲ್ಲುತ್ತೇವೆ ಎಂದು ಹೇಳುತ್ತಾರೆ. ಮೊದಲು ರಾಜ್ಯದ 224 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿ. ಆನಂತರ 123 ಸ್ಥಾನ ಗೆಲ್ಲಲಿ. ಡಾ.ಜಿ.ಪರಮೇಶ್ವರ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net