

ಶಿಕಾರಿಪುರ: ಭಾರತೀಯ ಜನತಾ ಪಕ್ಷದ ಉಸಿರೇ ನಮ್ಮ ಕಾರ್ಯಕರ್ತರು. ಇವರ ಪರಿಶ್ರಮ ಮತ್ತು ದೃಢಸಂಕಲ್ಪದ ಫಲವಾಗಿ ಪಕ್ಷ ಇಂದು ತ್ರಿವಿಕ್ರಮನಂತೆ ಬೆಳೆದು ನಿಂತಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ಬಿಜೆಪಿ ತಾಲೂಕು ಮಟ್ಟದ ವಿಶೇಷ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ಜನರ ಆಶೀರ್ವಾದದಿಂದ ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗಿ, ಸುಭದ್ರ ಭಾರತಕ್ಕೆ ಪೂರಕವಾಗಿ ಯೋಜನೆಗಳನ್ನು ರೂಪಿಸಿ ಹೊಸ ಶಕೆ ಆರಂಭಿಸಿದ್ದಾರೆ ಎಂದರು.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತೆಗೆದುಕೊಂಡ ಮತಗಳು 26 ಕೋಟಿ. ಕಾಂಗ್ರೆಸ್ ತೆಗೆದುಕೊಂಡಿದ್ದು 13 ಕೋಟಿ ಮಾತ್ರ. ರಾಹುಲ್ ಗಾಂಧಿ ಅವರ ಪಾದಯಾತ್ರೆ ಭಾರತ್ ಜೋಡೋ ಆಗಲಿಲ್ಲ. ಬದಲಿಗೆ ಭಾರತ್ ಥೋಡೋ ಆಗಿತ್ತು. ನೆಹರು ಕಾಲದಿಂದಲೂ ಒಡೆದಾಳುವ ನೀತಿಯಿಂದಲೇ ದೇಶವನ್ನು ಆಳಿದ್ದು. ಓಲೈಕೆ ರಾಜಕಾರಣದಿಂದ ಇನ್ನೂ ಹೊರಬಂದಿಲ್ಲ. ಜಾತಿ ಜಾತಿಗಳನ್ನು ಎತ್ತಿಕಟ್ಟುತ್ತ ಇಷ್ಟು ವರ್ಷಗಳ ಕಾಲ ಅಧಿಕಾರ ನಡೆಸುತ್ತ ಬಂದಿದೆ. ಆದರೆ ಬಿಜೆಪಿ ಅಖಂಡ ಭಾರತವನ್ನು ರೂಪಿಸುತ್ತಿದೆ ಎಂದು ಹೇಳಿದರು.
ರಾಹುಲ್ ಗಾಂಧಿ ಯಾವಾಗಲೂ ಸಂವಿಧಾನದ ಚಿಕ್ಕ ಪುಸ್ತಕ ಹಿಡಿದುಕೊಂಡು ಮಾತನಾಡುತ್ತಾರೆ. ಆದರೆ ಇದೇ ಸಂವಿಧಾನವನ್ನು ಅಧಿಕಾರ ಉಳಿಸಿಕೊಳ್ಳಲು ಬಳಸಿಕೊಂಡಿದ್ದು ಇವರ ಅಜ್ಜಿ ಪ್ರಧಾನಿ ಇಂದಿರಾ ಗಾಂಧಿ. ಬಿಜೆಪಿ ಜನರ ಉದ್ಧಾರಕ್ಕಾಗಿ ಸಂವಿಧಾನವನ್ನು ಬಳಸಿಕೊಂಡಿದೆ. ಇದು ಬಿಜೆಪಿಗೂ ಮತ್ತು ಕಾಂಗ್ರೆಸ್ ಪಕ್ಷಕ್ಕೂ ಇರುವ ವ್ಯತ್ಯಾಸ ಎಂದು ಹೇಳಿದರು
ದಲಿತರು ಮತ್ತು ಹಿಂದುಳಿದ ವರ್ಗಗಳ ಪರ ಎನ್ನುವ ಸಿದ್ದರಾಮಯ್ಯ ಅವರು ಹಿಂದುಳಿದವರ ಕಲ್ಯಾಣಕ್ಕೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿದ್ದಾರೆ. ವಾಲ್ಮೀಕಿ ನಿಗಮದ ಹಗರಣದಿಂದ ಚಂದ್ರಶೇಖರನ್ ಆತ್ಮಹತ್ಯೆಯಾಗಿದ್ದು ಇದಕ್ಕೆ ಸರ್ಕಾರವೇ ಕಾರಣ. ಗ್ಯಾರಂಟಿ ಯೋಜನೆಗಳಿಂದಾಗಿ ಶಾಸಕರಿಗೆ ಅನುದಾನ ಸಿಗದ ಕಾರಣ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ ಎಂದು ದೂರಿದರು.
ನಮ್ಮ ಕಾರ್ಯಕರ್ತರು ಮಹಾನಗರ ಪಾಲಿಕೆ, ಪುರಸಭೆ, ನಗರಸಭೆ, ಜಿಪಂ, ತಾಪಂ ಚುನಾವಣೆಗಳಲ್ಲಿ ಬಿಜೆಪಿಗೆ ಅತಿ ಹೆಚ್ಚು ಸ್ಥಾನಗಳು ಬರುವಂತೆ ಕೆಲಸ ಮಾಡಬೇಕು. ಕೇಂದ್ರ ಸರ್ಕಾರದ ಯೋಜನೆಗಳನ್ನು ಜನತೆಗೆ ತಲುಪಿಸಬೇಕು. ಭ್ರಷ್ಟ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡಬೇಕು ಎಂದು ತಿಳಿಸಿದರು.
ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಬಿಜೆಪಿ ತಾಲೂಕು ಅಧ್ಯಕ್ಷ ಹನುಮಂತಪ್ಪ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗಾಯತ್ರಿ ಮಲ್ಲಪ್ಪ, ಪ್ರಮುಖರಾದ ಎಚ್.ಟಿ.ಬಳಿಗಾರ್, ನಿವೇದಿತಾ ರಾಜು, ಸಿದ್ಲಿಂಗಪ್ಪ, ವೀರನಗೌಡ, ಎಂ.ಬಿ.ಚನ್ನವೀರಪ್ಪ, ಬಿ.ಡಿ.ಭೂಕಾಂತ, ಹಾಲಪ್ಪ, ಅಂಬಾರಗೊಪ್ಪ ಶೇಖರಪ್ಪ, ರಾಮಾನಾಯ್ಕ, ಹುಲ್ಮಾರ್ ಮಹೇಶ್, ಮಾಜಿ ರಾಘವೇಂದ್ರ, ಡಿ.ಎಲ್.ಬಸವರಾಜ್, ಬೆಣ್ಣೆ ಪ್ರವೀಣ ಇತರರಿದ್ದರು.