

ಬೆಂಗಳೂರು: ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಹನಿಟ್ರ್ಯಾಪ್‌ಗೆ ಪ್ರಯತ್ನ ಹೇಳಿಕೆಯು ಕಾಂಗ್ರೆಸ್ ಪಕ್ಷದ ವಾಷಿಂಗ್ ಮಷಿನ್‌ನಲ್ಲಿ ಕ್ಲೀನ್ ಆಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ರಾಜಣ್ಣ ಅವರಿಗೆ ಹನಿಟ್ರ್ಯಾಪ್ ಯತ್ನ ಪ್ರಕರಣವು ಸದನದಲ್ಲಿ ಗದ್ದಲ ಸೃಷ್ಟಿಸಿತ್ತು. ಈ ಘಟನೆ ನಡೆದೇ ಇಲ್ಲವೆಂಬ ವರದಿ ಬಂದಿದ್ದು, ಸಚಿವರ ಮಾತಿಗೆ ಬೆಲೆ ಇಲ್ಲವಾಗಿದೆ ಎಂದು ಟೀಕಿಸಿದರು.
ಸರ್ಕಾರ ಏನೇ ಮಾತನಾಡಿದರೂ ಅದು ಸರ್ಕಾರದ ಮಾತಾಗುತ್ತದೆ. ಅಂತಹವರ ಹೇಳಿಕೆಯನ್ನು ವಾಷಿಂಗ್ ಮಷಿನ್‌ಗೆ ಹಾಕಿ ಸ್ವಚ್ಛ ಮಾಡಲಾಗಿದೆ. ಪೊಲೀಸರ ಮೇಲೆ ಯಾರ ಒತ್ತಡವಿದೆ ಎಂದು ಗೊತ್ತಾಗಿಲ್ಲ. ಅವ್ಯವಹಾರಗಳನ್ನು ಈ ಸರ್ಕಾರ ಮುಚ್ಚಿಹಾಕುತ್ತಿದ್ದು, ಸಚಿವರಿಗೇ ನ್ಯಾಯ ಸಿಕ್ಕಿಲ್ಲ ಎಂದರೆ ಬಡಜನರ ಪಾಡೇನು ? ಎಂದು ಆರ್.ಅಶೋಕ್ ಪ್ರಶ್ನಿಸಿದರು.
ರಾಹುಲ್ ಗಾಂಧಿ ಆ.5ರಂದು ರಾಜ್ಯಕ್ಕೆ ಬರುವುದೇ ದೊಡ್ಡ ನಾಟಕ. ಸಿಎಂ ಕುರ್ಚಿಗಾಗಿ ಕಲಹ ಮರೆಮಾಚಲು ಚುನಾವಣಾ ಅಕ್ರಮ ಆರೋಪದ ವಿಷಯ ಪ್ರಸ್ತಾಪಿಸಿದ್ದಾರೆ ಎಂದು ಛೇಡಿಸಿದರು.
ಚುನಾವಣೆಯಲ್ಲಿ ಅಕ್ರಮ ನಡೆದಿರುವುದಕ್ಕೆ ಸಾಕ್ಷಾೃಧಾರಗಳಿದ್ದರೆ ದೂರು ದಾಖಲಿಸಬೇಕಿತ್ತು ಇಲ್ಲವೇ ಕೋರ್ಟ್ ಸಲ್ಲಿಸಬೇಕಾಗಿತ್ತು. ಚುನಾವಣೆಯಲ್ಲಿ ಅಕ್ರಮಗಳನ್ನು ಪರಿಚಯಿಸಿದ್ದೇ ಕಾಂಗ್ರೆಸ್ ಪಕ್ಷ ಎಂದು ತಿವಿದರು.
ಇಂದಿರಾಗಾಂಧಿಯವರು ಚುನಾವಣೆಯಲ್ಲಿ ಅಕ್ರಮ ಎಸಗಿರುವುದು ಕೋರ್ಟ್‌ನಲ್ಲಿ ಸಾಬೀತಾಗಿತ್ತು. ತನ್ನಂತೆಯೇ ಇತರರು ಮಾಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸುತ್ತಿದೆ. ಸಾಕ್ಷಾೃಧಾರಗಳು ಇಲ್ಲದ ಕಾರಣಕ್ಕೆ ಬೀದಿಗಿಳಿದು ಹೋರಾಟಕ್ಕೆ ಮುಂದಾಗಿದ್ದಾರೆ ಎಂದು ಆರ್.ಅಶೋಕ್ ತಿರುಗೇಟು ನೀಡಿದರು.
ಮೈಸೂರಿನಲ್ಲಿ ಡ್ರಗ್ಸ್ ಮಾಫಿಯಾ ಬೆಳೆಯಲು ಸರ್ಕಾರವೇ ಹೊಣೆಯಾಗಿದೆ. ನೆರೆಯ ರಾಜ್ಯದ ಪೊಲೀಸರು ಬಂದು ಡ್ರಗ್ಸ್ ್ಯಾಕ್ಟರಿ ಪತ್ತೆ ಹಚ್ಚಿದ್ದಾರೆ. ರಾಜ್ಯದ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.
ಕಾಲ್ತುಳಿತ ದುರಂತವನ್ನು ಪೊಲೀಸ್ ಇಲಾಖೆ ಮೇಲೆ ಹೊರಿಸಲಾಯಿತು. ಇದರಿಂದಾಗಿ ಇಲಾಖೆ ನೈತಿಕಸ್ಥೈರ್ಯ ಕುಸಿದಿದೆ. ಒಲ್ಲದ ಮನಸ್ಸಿನಿಂದ ಪರಮೇಶ್ವರ್ ಇಲಾಖೆ ಒಪ್ಪಿಕೊಂಡಿದ್ದಾರೆ. ಡ್ರಗ್ಸ್ ಮಾಫಿಯಾ ಬೇಧಿಸಲು ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಬೇಕು ಎಂದು ಆರ್.ಅಶೋಕ್ ಆಗ್ರಹಿಸಿದರು.