ಸಂವಿಧಾನದ ಮೌಲ್ಯ ಕಡೆಗಣಿಸಿದ ಕಾಂಗ್ರೆಸ್: ಮಾಜಿ ಸಿಎಂ ಯಡಿಯೂರಪ್ಪ ಟೀಕೆ | Bus fare hike not fair

BSY program
Published on

ಬೆಂಗಳೂರು: ಮಾತೆತ್ತಿದರೆ ಸಂವಿಧಾನದ ರಕ್ಷಕರು ತಾವೇ ಎಂದು ಕಾಂಗ್ರೆಸ್ ನಾಯಕರು ಬಿಂಬಿಸಿಕೊಳ್ಳುತ್ತಾರೆ. ಆದರೆ ಅಧಿಕಾರಕ್ಕಾಗಿ ಓಲೈಕೆ, ವೋಟ್ ಬ್ಯಾಂಕ್ ರಾಜಕಾರಣ, ಆರ್ಥಿಕತೆಗೆ ಧಕ್ಕೆ ತರುವ ಭರವಸೆ ನೀಡಿ ಸಂವಿಧಾನದ ಮೌಲ್ಯಗಳನ್ನೇ ಗಾಳಿಗೆ ತೂರಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಟೀಕಿಸಿದರು.

ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಂವಿಧಾನದ ಅಮೃತಮಹೋತ್ಸವ ನಿಮಿತ್ತ ಮಾಜಿ ಶಾಸಕ ವೈ.ಸಂಪಂಗಿ ನೇತೃತ್ವದ ದಲಿತ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಸಮಿತಿ ಭಾನುವಾರ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಆರ್ಥಿಕ ಪರಿಸ್ಥಿತಿ ನಿಭಾಯಿಸಲು ಸಾಧ್ಯವಿಲ್ಲದ ಭರವಸೆಗಳನ್ನು ನೀಡಿದೆ. ಇವುಗಳ ವೆಚ್ಚ ಭರಿಸಲು ಮತ್ತೆ ಜನರ ತಲೆ ಮೇರೆ ಭಾರ ಹೇರುತ್ತಿದೆ. ರಾಜ್ಯ ಸರ್ಕಾರದ ಈ ಕಾರ್ಯವೈಖರಿಗೆ ಜನರು ಛೀಮಾರಿ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.

ದರ ಹೆಚ್ಚಳ ವಾಪಸ್

ತೆರಿಗೆ, ಶುಲ್ಕ, ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಿಯಾಗಿದೆ. ಸುಳ್ಳು ಗ್ಯಾರಂಟಿಗಳನ್ನು ನೀಡಿ ಬಸ್ ಪ್ರಯಾಣ ದರ ಏರಿಕೆ ಮಾಡಿದ್ದು, ಕೂಡಲೇ ಹೆಚ್ಚಳ ಹಿಂಪಡೆದು ಚಾಲ್ತಿ ದರ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಹೇಳಿದ್ದನ್ನು ಕೇಳಿ, ಮಾಡಿದ್ದನ್ನು ನೋಡಿ ಸುಮ್ಮನಿರಲು ಸಾಧ್ಯವಿಲ್ಲ. ಅನ್ಯಾಯದ ವಿರುದ್ಧ ಪ್ರತಿಭಟಿಸುವ ಹಕ್ಕು ಸಂವಿಧಾನ ನೀಡಿದೆ ಎಂದು ಬಿ.ಎಸ್.ಯಡಿಯೂರಪ್ಪ ಗುಟುರು ಹಾಕಿದರು.

ಡಾ.ಬಿ.ಆರ್.ಅಂಬೇಡ್ಕರ್ ಜೀವಿತಕಾಲದುದ್ದಕ್ಕೂ ಕಾಂಗ್ರೆಸ್‌ನವರು ಅಪಮಾನಿಸುತ್ತಾ ಬಂದಿದ್ದು, ಈಗ ಡಾ.ಅಂಬೇಡ್ಕರ್ ಬಗ್ಗೆ ಎಲ್ಲಿಲ್ಲದ ಕಾಳಜಿ, ಪ್ರೀತಿ ತೋರಿಸುತ್ತಿದ್ದಾರೆ ಎಂದು ಕುಟುಕಿದರು.

ಸಂವಿಧಾನ ದಿನವನ್ನಾಗಿ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ೋಷಿಸಿದರು. ಅಲ್ಲದೆ, ಪಂಚ ತೀರ್ಥಗಳನ್ನು ಅಭಿವೃದ್ಧಿಪಡಿಸಿ ಡಾ.ಅಂಬೇಡ್ಕರ್‌ಗೆ ನೈಜ ಗೌರವ ಸಲ್ಲಿಸುವ ಕೆಲಸ ಮಾಡಿದ್ದಾರೆ.

ಸಂವಿಧಾನದ 370ನೇ ವಿಧಿ, ತ್ರಿವಳಿ ತಲಾಖ್ ರದ್ದು ಮತ್ತಿತರ ಮಹತ್ವದ ನಿರ್ಧಾರಗಳ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಆಶಯಗಳನ್ನು ಈಡೇರಿಸಲು ಮೋದಿ ಶ್ರಮಿಸುತ್ತಿದ್ದಾರೆ ಎಂದು ಬಿ.ಎಸ್.ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕಿಂತ ಮುಂಚೆ ವಿಧಾನಸೌಧ ಬಳಿ ಡಾ.ಬಿ.ಆರ್.ಅಂಬೇಡ್ಕರ್‌ಗೆ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

ನಂತರ ಡಾ.ಅಂಬೇಡ್ಕರ್ ಭಾವಚಿತ್ರವುಳ್ಳ ರಥದ ಮೆರವಣಿಗೆ ಮುಖ್ಯ ಮಾರ್ಗದ ಮೂಲಕ ಸ್ವಾತಂತ್ರ್ಯ ಉದ್ಯಾನವನ ತಲುಪಿತು. ವಿವಿಧ ಕಲಾ ತಂಡಗಳು, ಜಾನಪದ ಮೇಳಗಳು ಜನರನ್ನು ಆಕರ್ಷಿಸಿದವು.

ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಮಾಜಿ ಶಾಸಕರಾದ ವೈ.ಸಂಪಂಗಿ, ಎನ್.ಮಹೇಶ್, ಎಂ.ಪಿ.ರೇಣುಕಾಚಾರ್ಯ, ಹರತಾಳು ಹಾಲಪ್ಪ, ದಲಿತ ಮುಖಂಡರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net