

ಬೆಂಗಳೂರು: ಪರಿಶಿಷ್ಟ ಜಾತಿ ಒಳ ಮೀಸಲಾತಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಡ್ಡಗಾಲು ಹಾಕಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಗಂಭೀರ ಆಪಾದನೆ ಮಾಡಿದ್ದು, ಈ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧವೆಂದು ಸೆಡ್ಡು ಹೊಡೆದಿದ್ದಾರೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶ ಪ್ರಕಟವಾದ ಬೆನ್ನಲ್ಲೇ ತೆಲಂಗಾಣ ಸಿಎಂ ರೇವಂತರೆಡ್ಡಿ ಎಸ್‌ಸಿ ಮೀಸಲು ವರ್ಗೀಕರಣ ಮಾಡುವುದಾಗಿ ೋಷಿಸಿದ್ದರು.
ಕೂಡಲೇ ಮಲ್ಲಿಕಾರ್ಜುನ ಖರ್ಗೆ ಕರೆ ಮಾಡಿ ತಡೆಯೊಡ್ಡಿದ್ದಾರೆ. ಬಹಿರಂಗವಾಗಿ ೋಷಿಸಿ ಇಕ್ಕಟ್ಟಿಗೆ ಸಿಲುಕಿದ್ದ ರೇವಂತರೆಡ್ಡಿ ಕಾಲಯಾಪನೆ ಮಾಡಲು ದತ್ತಾಂಶ ಸಂಗ್ರಹಿಸುವ ಕಾರಣವೊಡ್ಡಿ ತಜ್ಞರ ಸಮಿತಿ ರಚಿಸಿ, ಕಣ್ಣೊರೆಸುವ ತಂತ್ರವಾಗಿ ಎಲ್ಲ ಸರ್ಕಾರಿ ನೇಮಕಗಳ ಅಧಿಸೂಚನೆ ತಡೆದಿದ್ದಾರೆ.
ತೆಲಂಗಾಣ ಮಾತ್ರವಲ್ಲ ಕರ್ನಾಟಕ ಸೇರಿ ದಕ್ಷಿಣ ಭಾರತದ ಎಲ್ಲ ಕಾಂಗ್ರೆಸ್ ನಾಯಕರಿಗೆ ಎಸ್‌ಸಿ ಒಳ ಮೀಸಲು ಜಾರಿಗೆ ತರಬಾರದೆಂದು ಹೈಕಮಾಂಡ್ ಸ್ಪಷ್ಟ ನಿರ್ದೇಶನವಿತ್ತಿದೆ. ಇದು, ಮಲ್ಲಿಕಾರ್ಜುನ ಖರ್ಗೆ ಒತ್ತಾಸೆಯಂತೆ ಹೊರಬಿದ್ದ ಅಪ್ಪಣೆಯಾಗಿದೆ ಎಂದು ಎ.ನಾರಾಯಣಸ್ವಾಮಿ ದೂರಿದರು.
ಸಾಮಾಜಿಕ ನ್ಯಾಯದ ಬಗ್ಗೆ ನೈಜ ಕಾಳಜಿ, ಸಮಾನತೆಯೆಡೆಗೆ ಸಿಎಂ ಸಿದ್ದರಾಮಯ್ಯಗೆ ನಿಜವಾಗಿ ಬದ್ಧತೆಯಿದ್ದರೆ ದಿಕ್ಕು ತಪ್ಪಿಸಬಾರದು, ಸುಪ್ರೀಂ ಕೋರ್ಟ್ ಆದೇಶಂತೆ ತಕ್ಷಣವೇ ಒಳ ಮೀಸಲಾತಿ ಕೊಡಿ ಎಂದು ಆಗ್ರಹಿಸಿದರು.
ದತ್ತಾಂಶ ಸಂಗ್ರಹಣೆ ನೆಪವೊಡ್ಡಿ ಹೈಕೋರ್ಟ್ ಏಕಸದಸ್ಯ ಆಯೋಗ ರಚನೆಗೆ ಮುಂದಾಗಿದ್ದು, ಎಲ್ಲ ಸವಲತ್ತುಗಳ ವಂಚಿತರಾಗಿ ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ಮಾದಿಗ ಮತ್ತದರ ಉಪಪಂಗಡಗಳ ಕೂಗಿಗೆ ಇನ್ನೂ ಓಗೊಡುವ ಮನಸ್ಸಾಗಿಲ್ಲವೆ ? ಎಂದು ಭಾವುಕರಾಗಿ ಕೇಳಿದರು.
ಜಾತಿ ಆಧಾರದಲ್ಲಿ ಒಳ ಮೀಸಲಾತಿ ಕೇಳುತ್ತಿಲ್ಲ. ಅಸ್ಪೃಶ್ಯತೆ, ಜನಸಂಖ್ಯೆ ಆಧಾರವಾಗಿಟ್ಟುಕೊಂಡು ಮೀಸಲು ಸೌಲಭ್ಯವನ್ನು ಹಂಚಿಕೆ ಮಾಡಲು ಕೇಳುತ್ತಿದ್ದೇವೆ. ದಕ್ಷಿಣಭಾರತದ ಅಧ್ಯಯನ ನಡೆಸಿದ ಯಾವುದೇ ಆಯೋಗದ ವರದಿಗಳನ್ನು ಗಮನಿಸಿ, ಮಾದಿಗ ಮತ್ತದರ ಉಪಪಂಗಡಗಳಲ್ಲಿ ಅತ್ಯಂತ ನಿಕೃಷ್ಟ ಹಾಗೂ ಕನಿಷ್ಠ ಸವಲತ್ತುಗಳಿಂದ ವಂಚಿತ ಜನಸಂಖ್ಯೆ ಹೆಚ್ಚಿದೆ ಎಂದು ಸಾರಿವೆ.
ಅಂಕಿ-ಅಂಶಗಳನ್ನು ಕಲೆಹಾಕುವ ಕಾರಣವೊಡ್ಡಿ ಮುಂದಿನ ಜನಗಣತಿ ಮುಗಿದು, ವರದಿ ಸಲ್ಲಿಕೆ ತನಕ ಕಾಯುವವರಿದ್ದಿರೇನೋ ತಿಳಿಯದು. ಆದರೆ ಒಳಮೀಸಲಿಗೆ ಬೇಕಾದ ಮೂರು ಪ್ರಕಾರದ ದತ್ತಾಂಶಗಳು ಸರ್ಕಾರದ ಬಳಿಯಿದ್ದು, ಇಚ್ಛಾಶಕ್ತಿ ಮುಖ್ಯವಾಗಿದೆ ಎಂದರು.
ಬೊಮ್ಮಾಯಿ ಆಡಳಿತಾವಧಿಯಲ್ಲಿ ಜೆ.ಸಿ.ಮಾಧುಸ್ವಾಮಿ ನೇತೃತ್ವದ ಸಚಿವ ಸಂಪುಟದ ಉಪ ಸಮಿತಿ ನಿಖರವಾದ ಅಂಕಿ-ಅಂಶಗಳನ್ನು ಸಲ್ಲಿಸಿದೆ. ಬಿಜೆಪಿ ಸರ್ಕಾರ ಮಾಡಿದ್ದದು, ಬೇಡವೆಂದಾದರೆ ಅದನ್ನು ಬಿಡಿ.
ನ್ಯಾ.ಎ.ಜೆ.ಸದಾಶಿವ ಆಯೋಗ ಅಧ್ಯಯನ ನಡೆಸಿ ಸಲ್ಲಿಸಿದ ವರದಿ ದಶಕ ಕಳೆದಿದೆ. ಅದರಲ್ಲೂ ದತ್ತಾಂಶಗಳಿವೆ. ಇದೂ ಬೇಡವೆಂದಾದರೆ ಸಿದ್ದರಾಮಯ್ಯ ನೇತೃತ್ವದ ಹಿಂದಿನ ಅವಧಿಯಲ್ಲಿ 160 ಕೋಟಿ ರೂ. ಖರ್ಚು ಮಾಡಿ ತರಿಸಿಕೊಂಡ ವರದಿಯಿದೆ.
ಎಚ್.ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ಮನೆ ಮನೆ ಸಮೀಕ್ಷೆ ಮಾಡಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಿಂದುಳಿದಿರುವಿಕೆಯನ್ನು ಪತ್ತೆ ಹಚ್ಚಿ ವರದಿ ಸಲ್ಲಿಸಿದೆ ಎಂದು ಹೇಳಿದೆ.
ಈ ವರದಿಯಲ್ಲಿನ ದತ್ತಾಂಶಗಳನ್ನಾದರೂ ಸರ್ಕಾರ ಬಳಸಿಕೊಂಡು ಒಳ ಮೀಸಲಾತಿ ಜಾರಿಗೆ ತರಲೇಬೇಕು. ಇನ್ನೊಂದು ಆಯೋಗ, ದತ್ತಾಂಶ ಸಂಗ್ರಹದ ಹೆಸರಿನಲ್ಲಿ ಕಾಲಹರಣ ಸರಿಯಲ್ಲ ಎಂದು ಎ.ನಾರಾಯಣಸ್ವಾಮಿ ಆಕ್ಷೇಪಿಸಿದರು.